ಗೋಣಿಕೊಪ್ಪಲು, ಏ.11. ಕಳೆದ 6 ದಿನಗಳಿಂದ ಹುಲಿಯ ಸೆರೆಗೆ ತಂತ್ರಗಾರಿಕೆ ಬಳಸಿರುವ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಇಲಾಖೆಯ ಕಾನೂನು ತೊಡಕು ಒಂದೆಡೆ ಆದರೆ, ದಿನ ಪೂರ್ತಿಅಧಿಕಾರಿಗಳು ತಮ್ಮ ತಾಳ್ಮೆಯನ್ನು ಪರೀಕ್ಷೆಗೆ ಒಡ್ಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಮುಂಜಾನೆ 7 ಗಂಟೆಯವರೆಗೆ ಗದ್ದೆ ಬಯಲಿನಲ್ಲಿ ಮಂಜು ಆವರಿಸುತ್ತಿದ್ದು ಒಬ್ಬರನ್ನೊಬ್ಬರು ಕಾಣುವದೇ ಕಷ್ಟವಾಗಿದೆ. ಆದರೂ ಅಧಿಕಾರಿಗಳು, ಅರವಳಿಕೆ ತಜ್ಞರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಹುಲಿಯನ್ನು ಸೆರೆ ಹಿಡಿದೇ ತೀರುತ್ತೇವೆ ಎಂದು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸದ್ಯಕ್ಕೆ ಆನೆಯಿಂದ ಕಾರ್ಯಾಚರಣೆಯನ್ನು ತಡೆಹಿಡಿಯಲಾಗಿದ್ದು ಸಮೀಪದ ಖಾಲಿ ಜಾಗದಲ್ಲಿ ಆನೆಯನ್ನು ಉಪಚರಿಸಲಾಗುತ್ತಿದೆ. 60ಕ್ಕೂ ಹೆಚ್ಚಿನ ಅರಣ್ಯ ಸಿಬ್ಬಂದಿಗಳು ನಿದ್ರೆಗೆಟ್ಟು ಕೆಲಸ ನಿರ್ವಹಿಸುತ್ತಿದ್ದು ಕೆಲವು ಸಿಬ್ಬಂದಿಗಳಿಗೆ ಆರೋಗ್ಯ ಹದಗೆಟ್ಟಿದೆ, ಆದರೂ ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಾಳೆಲೆ ಸಮೀಪದ ಕೊಟ್ಟಗೇರಿಯ ಮಾಪಂಗಡ ಸಜನ್ ದೇವಯ್ಯನವರ ತೋಟದ ಸಮೀಪದ ಕಾಡಿನಲ್ಲಿ ಹುಲಿ ಸಂಚಾರದ ಸುಳಿವು ಗೋಚರಿಸಿದ್ದರೂ ಇದರ ಓಡಾಟ ರಾತ್ರಿಯ ವೇಳೆಯಲ್ಲಿ ಮಾತ್ರ ಕಂಡು ಬರುತ್ತಿದೆ. ಇದರಿಂದ ಹುಲಿಯ ಸಂಚಾರವನ್ನು ಗುರುತಿಸುವದು ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ನಾಗರಹೊಳೆ, ತಿತಿಮತಿ, ಭಾಗದ ಅರಣ್ಯ ಅಧಿಕಾರಿಗಳು, ರ್ಯಾಪಿಡ್ ಫೋರ್ಸ್ ಸಿಬ್ಬಂದಿಗಳು, ಹುಲಿ ಸೆರೆಗೆ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಹಿರಿಯ ಅಧಿಕಾರಿಗಳಾದ ಡಿಎಫ್‍ಓ ಕ್ರಿಸ್ತುರಾಜ್, ಎಸಿಎಫ್ ಪೌಲ್ ಆ್ಯಂಟೋನಿ, ಶ್ರೀಪತಿ, ಆರ್.ಎಫ್.ಓ. ಗಂಗಾಧರ್, ಕಿರಣ್, ಅಶೋಕ್ ಹುನುಗುಂದ ಅವರುಗಳು ಚುನಾವಣೆಯ ಜವಾಬ್ದಾರಿ ಇದ್ದರೂ ನಿಭಾಯಿಸಿ ಕೊಂಡು ಸ್ಥಳದಲ್ಲಿರುವ ಸಿಬ್ಬಂದಿ ಗಳೊಂದಿಗೆ ಮಾರ್ಗದರ್ಶನ ಮಾಡುವ ಮೂಲಕ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
-(ಹೆಚ್.ಕೆ. ಜಗದೀಶ್)