ಮಡಿಕೇರಿ, ಏ. 11 : ಅಲ್ ಇಕ್ಲಾಸ್ ಅರೇಬಿಕ್ ಮದರಸಾ ಎಂಬ ಎಜುಕೇಷನ್ ಟ್ರಸ್ಟ್ ಹೆಸರಿನಲ್ಲಿ ಡೇಕೇರ್ ಮತ್ತು ಪ್ಲೇಹೋಮ್ ಶಾಲೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಸೆಕ್ಷನ್ 30 ಮತ್ತು 31 ರಡಿಯಲ್ಲಿ ಕರ್ನಾಟಕ ಶಿಕ್ಷಣ ಸಂಸ್ಥೆಗಳ ವರ್ಗಿಕರಣ ಮತ್ತು ನೋಂದಣಿ ನಿಯಮಗಳ ಪ್ರಕಾರ ಅನುಮತಿ ಇಲ್ಲದೆ ಅನಧೀಕೃತವಾಗಿ ಎಲ್‍ಕೆಜಿ ಮತ್ತು ಯುಕೆಜಿ ಹಾಗೂ 1 ರಿಂದ 03ನೇ ತರಗತಿವರೆಗೆ ಶಾಲೆ ನಡೆಸುತ್ತಿದ್ದು, ಇಲಾಖೆಯಲ್ಲಿ ನೋಂದಣಿ ಇಲ್ಲದೆ ಶಾಲೆಯನ್ನು ನಡೆಸುತ್ತಿರುವದು ಕಂಡುಬಂದಿದೆ. “ಡೇಕೇರ್ ಮತ್ತು ಪ್ಲೇಹೋಮ್ ಬಿಬಿ ಹಜಿರಾ ಎಜುಕೇಷನ್ ಟ್ರಸ್ಟ್ ಹಿಲ್ ರೋಡ್ ಮಡಿಕೇರಿ” ಈ ಶಾಲೆಯು ಅನಧಿಕೃತ ಶಾಲೆಯಾಗಿರುವದರಿಂದ, ಈ ಶಾಲೆಗೆ ಮಕ್ಕಳನ್ನು ಸೇರಿಸದಂತೆ ಪೋಷಕರು ಮತ್ತು ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ ಕೋರಿದ್ದಾರೆ.