ಆಲೂರು ಸಿದ್ದಾಪುರ, ಏ. 11: ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವದ್ದರಿಂದ ಶರೀರದ ಅಂಗಾಂಗದಲ್ಲಿ ಉತ್ತಮ ರಕ್ತ ಉತ್ಪತ್ತಿಯಾಗುವದರ ಜೊತೆಯಲ್ಲಿ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆ ನಿವಾರಣೆಯಾಗುತ್ತದೆ ಎಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ. ಕರುಂಬಯ್ಯ ಅಭಿಪ್ರಾಯಪಟ್ಟರು.
ಅವರು ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ರಕ್ತಗುಂಪು ತಪಾಸಣೆ ಮತ್ತು ಸಕ್ಕರೆ ಕಾಯಿಲೆ ತಪಾಸಣೆ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಜನರು ರಕ್ತದಾನ ಮಾಡಲು ಮುಂದೆ ಬರುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ. ಯುವ ಜನರು ರಕ್ತದಾನ ಮಾಡುವ ಕಾರ್ಯದಲ್ಲಿ ಮುಂದಾಗಬೇಕೆಂದು ಮನವಿ ಮಾಡಿದರು. ಅರೆಭಾಷೆ ಗೌಡ ಸಮಾಜದ ವತಿಯಿಂದ ರಕ್ತದಾನ ಮತ್ತು ರಕ್ತಗುಂಪು ತಪಾಸಣೆ ಶಿಬಿರವನ್ನು ನಡೆಸುತ್ತಿರುವ ಕಾರ್ಯ ಸಮಾಜಕ್ಕೆ ಹಾಗೂ ಯುವ ಸಮೂಹಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸುಪರ್ಣ ಕೃಷ್ಣಾನಂದ್ ಮಾತನಾಡಿ, ರಕ್ತವನ್ನು ಕೃತಕವಾಗಿ ತಯಾರು ಮಾಡಲು ಸಾಧ್ಯವಿಲ್ಲ, ರೋಗಿಗಳಿಗೆ ರಕ್ತದ ಸಮಸ್ಯೆಯಾದಾಗ ಮನುಷ್ಯನ ರಕ್ತವನ್ನೆ ಕೊಡಬೇಕಾಗುತ್ತದೆ ಈ ನಿಟ್ಟಿನಲ್ಲಿ ರಕ್ತದ ಕೊರತೆಯನ್ನು ನೀಗಿಸಲು ರಕ್ತದಾನ ಶಿಬಿರ ಪೂರಕವಾಗುತ್ತದೆ ಎಂದರು. ಪ್ರತಿಯೊಬ್ಬರೂ ರಕ್ತದಾನ ಮಾಡುವಂತಹ ಶ್ರೇಷ್ಠ ಕಾರ್ಯಕ್ಕೆ ಮುಂದಾಗುವದರ ಜೊತೆಯಲ್ಲಿ ರೋಗಿಯೊಬ್ಬನನ್ನು ಉಳಿಸಿದ್ದೇನೆಂಬ ಧನ್ಯತಾಭಾವ ಮೂಡುತ್ತದೆ ಎಂದರು.
ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮತದಾನದ ಹಕ್ಕು ಮತ್ತು ಮಹತ್ವ ಬಗ್ಗೆ ಜನರನ್ನು ಜಾಗೃತಿಗೊಳಿಸುವ ಸಲುವಾಗಿ ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಶಿವಪ್ರಕಾಶ್ ಅವರು ಶಿಬಿರದಲ್ಲಿ ಭಾಗವಹಿಸಿದ ಜನರಿಗೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಕುರಿತಾದ ಪ್ರತಿಜ್ಞಾ ವಿಧಿ ಬೋಧಿಸಿದರು. ಸಮಾರಂಭದಲ್ಲಿ ಅರೆಭಾಷೆ ಗೌಡ ಸಮಾಜದ ಪ್ರಧಾನ ಕಾರ್ಯದರ್ಶಿ ಕುಯ್ಯುಮುಡಿ ಜಯಕುಮಾರ್, ಉಪಾಧ್ಯಕ್ಷ ಬಟ್ಯನ ಈರಪ್ಪ, ಪ್ರಮುಖರಾದ ಅಮ್ಮಾಜಿರ ಕಿರಣ್ಕುಮಾರ್, ಅರೆಭಾಷೆ ಗೌಡ ಸಮಾಜದ ಪದಾಧಿಕಾರಿಗಳು, ಮಡಿಕೇರಿ ರಕ್ತನಿಧಿ ಕೇಂದ್ರದ ಸಿಬ್ಬಂದಿಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಬಿರದಲ್ಲಿ 65 ಮಂದಿ ರಕ್ತದಾನ ಮಾಡಿದರು. ಹಲವಾರು ಮಂದಿ ಶಿಬಿರದಲ್ಲಿ ರಕ್ತಗುಂಪು ಹಾಗೂ ಸಕ್ಕರೆ ಕಾಯಿಲೆ ಬಗ್ಗೆ ತಪಾಸಣೆ ಮಾಡಿಸಿಕೊಂಡರು.