ಮಡಿಕೇರಿ, ಏ. 11 :ಆದಿ ದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಏ.16 ರಂದು ಸೋಮವಾರಪೇಟೆ ಯಲ್ಲಿ ನಡೆಸಲು ಉದ್ದೇಶಿಸಿದ್ದ ಆದಿ ದ್ರಾವಿಡ ಸಮಾವೇಶವನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಿರುವದಾಗಿ ಸಂಘದ ಅಧ್ಯಕ್ಷ ಹೆಚ್.ಎಂ. ಸೋಮಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ದುರ್ಬಲ ವರ್ಗವಾಗಿರುವ ಆದಿ ದ್ರಾವಿಡ ಸಮಾಜದ ಸಮಾವೇಶವನ್ನು ವಿಜ್ರಂಭಣೆಯಿಂದ ನಡೆಸಬೇಕೆನ್ನುವ ಉದ್ದೇಶದಿಂದ ಚುನಾವಣೆಯ ನಂತರ ಮೇ 25ರ ಆಸುಪಾಸಿನ ದಿನಾಂಕ ವನ್ನು ನಿಗದಿ ಮಾಡಿ ಕಾರ್ಯಕ್ರಮವನ್ನು ಆಯೋಜಿಸುವದಾಗಿ ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ವರ್ಷದ ಜಯಂತಿಯ ಅಂಗವಾಗಿ ಸಮಾವೇಶ ನಡೆಸುತ್ತಿದ್ದು, ಅಂದು ಬೃಹತ್ ಮೆರವಣಿಗೆಯನ್ನು ಆಯೋಜಿಸಬೇಕೆನ್ನುವ ಉದ್ದೇಶವಿದೆ. ಇದಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾದ ಕಾರಣ ಸಮಾವೇಶವನ್ನು ಮುಂದೂಡಿರುವದಾಗಿ ಸೋಮಪ್ಪ ತಿಳಿಸಿದರು. ಚಿಕ್ಕಮಗಳೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತುಳು ಆದಿ ದ್ರಾವಿಡ ಬಾಂಧವರ ಸಹಕಾರದೊಂದಿಗೆ ಸಮಾವೇಶ ನಡೆಸಲಾಗುತ್ತಿದ್ದು, ಇದರಲ್ಲಿ 5 ಸಾವಿರಕ್ಕೂ ಹೆಚ್ಚಿನ ಸಮಾಜ ಬಾಂಧವÀರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ವಿವಿಧ ಬೇಡಿಕೆಗಳ ಬಗ್ಗೆಯೂ ಗಮನ ಸೆಳೆÉಯಲಾಗುವದೆಂದು ಸೋಮಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಪಿ.ಎ.ಸುರೇಶ್, ಪ್ರಧಾನ ಕಾರ್ಯದರ್ಶಿ ಉಮೇಶ್ ಹಾಗೂ ಸದಸ್ಯ ಮಧು ಉಪಸ್ಥಿತರಿದ್ದರು.