ಮಡಿಕೇರಿ, ಏ. 11: ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 3ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕರೇಷ್ಮೆ ಚೆನ್ನಂಗಿ ಗ್ರಾಮದ ಆರೋಪಿ ವೈ.ಕೆ. ಮಲ್ಲಪ್ಪ ಎಂಬಾತ ಯುವತಿಯೋರ್ವಳನ್ನು ಪ್ರೀತಿಸಿ, ಮದುವೆಯಾಗುವದಾಗಿ ನಂಬಿಸಿ ತಾ. 3.2.2016 ರಂದು ಅತ್ಯಾಚಾರವೆಸಗಿದ್ದ. ಆಕೆ ಗರ್ಭಿಣಿ ಎಂದು ತಿಳಿದ ಬಳಿಕ ಮದುವೆಗೆ ನಿರಾಕರಿಸಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ 3ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪವನೇಶ್ ಡಿ. ಅವರು ಆರೋಪಿಗೆ ಅತ್ಯಾಚಾರ ಎಸಗಿದ ಆರೋಪಕ್ಕಾಗಿ 10 ವರ್ಷಗಳ ಕಠಿಣ ಸಜೆ ಮತ್ತು ರೂ. 10,000 ದಂಡ ಮತ್ತು ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿ ವಂಚನೆ ಮಾಡಿರುವ ಅಪರಾಧಕ್ಕಾಗಿ 1 ವರ್ಷದ ಕಠಿಣ ಸಜೆ ಮತ್ತು ರೂ. 5,000 ದಂಡ ವಿಧಿಸಿದ್ದು, ವಸೂಲಾತಿಯಾಗುವ ದಂಡದ ಹಣದಲ್ಲಿ ರೂ. 12,500ವನ್ನು ನೊಂದ ಯುವತಿಗೆ ನೀಡಲು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಎಂ. ಕೃಷ್ಣವೇಣಿ ವಾದಿಸಿದರು.