ವೀರಾಜಪೇಟೆ, ಏ. 9: ವೀರಾಜಪೇಟೆ ಬಳಿಯ ಹೆಗ್ಗಳ ಗ್ರಾಮದಲ್ಲಿರುವ ಅಯ್ಯಪ್ಪ ಭಗವತಿ ದೇವಾಲಯದ ನವೀಕರಣ, ಬ್ರಹ್ಮಕಲಶೋತ್ಸವ ತಾ. 5 ರಿಂದ ಪ್ರಾರಂಭಗೊಂಡು ತಾ. 7 ರ ತನಕ ವಿವಿಧ ಪೂಜಾ ಸಂಪ್ರದಾಯ ಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಹೆಗ್ಗಳದಲ್ಲಿರುವ ಅಯ್ಯಪ್ಪ (ಶಾಸ್ತಾವ್) ದೇವರು ಇತಿಹಾಸದ ಪ್ರಕಾರ ಕೇರಳದಿಂದ ಬಂದು ಗಡಿ ಭಾಗ ಚೌರಿಮಲೆ ಬೆಟ್ಟದ 103 ಎಕರೆ ವಿಶಾಲ ಕಾಡಿನಲ್ಲಿ ಗ್ರಾಮದ ಭಗವತಿ ದೇವಾಲಯದ ಎದುರು ನೆಲೆ ನಿಂತಿತು. ಅಯ್ಯಪ್ಪ ದೇವರಿಗೆ ಅನೇಕ ವರ್ಷಗಳಿಂದಲೂ ಚಿಕ್ಕ ಗೋಪುರ ದಲ್ಲಿ ಪೂಜೆ ಸಲ್ಲಿಸಿದ ತರುವಾಯ ಸುಮಾರು ರೂ. 25 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಈಗ ದೇವಾಲಯ ನವೀಕರಣ, ಬ್ರಹ್ಮಕಲಶೋತ್ಸವವು ಹೆಗ್ಗಳ, ಆರ್ಜಿ, ಬೇಟೋಳಿ ಗ್ರಾಮಸ್ಥರುಗಳ ಪೂರ್ಣ ಸಹಕಾರ ದೊಂದಿಗೆ ನಡೆಯಿತು.
ದೇವಾಲಯ ಸಮಿತಿಯ ಅಧ್ಯಕ್ಷ ಅಮ್ಮಣಕುಟ್ಟಂಡ ಜಿ. ಬೋಪಣ್ಣ ಮಾಧ್ಯಮದವರೊಂದಿಗೆ ಮಾತನಾಡಿ, ದೇವಾಲಯದ ನವೀಕರಣ -ಬ್ರಹ್ಮಕಲಶೋತ್ಸವಕ್ಕೆ ಗ್ರಾಮಸ್ಥರ ಹಾಗೂ ನಾಡಿನ ಭಕ್ತಾದಿಗಳ ತನು ಮನ ಧನದ ಸಹಕಾರದಿಂದ ಉತ್ತಮವಾಗಿ ನೆರವೇರಿದೆ ಎಂದರು.
ಈ ಸಂದರ್ಭ ದೇವಾಲಯ ಸಮಿತಿಯ ಉಪಾಧ್ಯಕ್ಷ ಅಚ್ಚಪಂಡ ಸಿ. ಗಣೇಶ್, ಕಾರ್ಯದರ್ಶಿ ಕಬ್ಬಚ್ಚಿರ ಬೋಪಣ್ಣ, ಜೀರ್ಣೋದ್ಧಾರ ಸಮಿತಿಯ ಪೋರೆರ ಬಿದ್ದಪ್ಪ, ಸದಸ್ಯರುಗಳಾದ ಎ. ಈರಪ್ಪ, ಅಚ್ಚಪಂಡ ದಿನೇಶ್ ಬೋಪಣ್ಣ, ಪಿ. ನಂಜುಂಡ, ಪಟ್ಟು ಅಯ್ಯಪ್ಪ, ಅಮ್ಮಣ ಕುಟ್ಟಂಡ ನರೇಂದ್ರ, ಕೀತಿಯಂಡ ಸುಬ್ಬಯ್ಯ, ನಾಯಕಂಡ ವಿಜು, ಪಟ್ಟಡ ಸತೀಶ್, ಚಂದಪಂಡ ಮಾಚಯ್ಯ, ನೆರೆಕರೆ ಗ್ರಾಮ ಗಳಿಂದಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
ದೇವರ ಪ್ರತಿಷ್ಠಾಪನಾ ಕಾರ್ಯ ಆರಂಭದ ದಿನದಿಂದಲೂ ಭಕ್ತಾದಿ ಗಳಿಗೆ ಅನ್ನಸಂತರ್ಪಣೆ ಏರ್ಪಡಿಸ ಲಾಗಿತ್ತು.