ಸೋಮವಾರಪೇಟೆ,ಏ.9: ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಕೊಡಗು ಜಿಲ್ಲೆಯ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಅಧಿಕೃತ ಘೋಷಣೆಯಾದ ನಂತರ ಅಪ್ಪಚ್ಚು ರಂಜನ್ ಅವರು ಇಂದು ಪುಷ್ಪಗಿರಿ ಶ್ರೀ ಶಾಂತಮಲ್ಲಿಕಾರ್ಜುನ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.

ಶ್ರೀ ಶಾಂತಮಲ್ಲಿಕಾರ್ಜುನ ದೇವರಿಗೆ ವಿಶೇಷ ಅಭಿಷೇಕ, ಪ್ರಾರ್ಥನೆ ಸಲ್ಲಿಸಿದ ರಂಜನ್, ನಂತರ ವಿವಿಧ ಸುಗ್ಗಿ ಉತ್ಸವಗಳಲ್ಲಿ ಪಾಲ್ಗೊಂಡರು. ನಂತರ ಮಾತನಾಡಿದ ಅವರು, ಕಾರ್ಯಕರ್ತರ ಪರಿಶ್ರಮದಿಂದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಕೊಡಗಿನ ಎರಡೂ ಕ್ಷೇತ್ರಗಳಲ್ಲೂ ಜಯ ದಾಖಲಿಸುವ ಮೂಲಕ ಬಿಜೆಪಿ ಭದ್ರಕೋಟೆಯೆಂಬದನ್ನು ಮತ್ತೊಮ್ಮೆ ನಿರೂಪಿಸಲಾಗುವದು. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ಕೊಡಗಿನ ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡಲಾಗುವದು. ಎಂದರು.

ಶಾಂತಳ್ಳಿ ವಿಎಸ್‍ಎಸ್‍ಎನ್ ಅಧ್ಯಕ್ಷ ಕುಂದಳ್ಳಿ ದಿನೇಶ್, ಪಕ್ಷದ ಪ್ರಮುಖರಾದ ಹರಗ ಉದಯ್ ಸೇರಿದಂತೆ ಇತರರು ಶಾಸಕರೊಂದಿಗೆ ಪೂಜೆಯಲ್ಲಿ ಭಾಗವಹಿಸಿದ್ದರು.