ವೀರಾಜಪೇಟೆ, ಏ. 9: ವೀರಾಜಪೇಟೆ ಪಟ್ಟಣದ ಹಲವು ದಿನಸಿ ಅಂಗಡಿಗಳಲ್ಲಿ ನಕಲಿ ಅಡುಗೆ ಎಣ್ಣೆ ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿರುವದು ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳ ಹಿಂದೆ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ನಗರದ ಹೊರ ವಲಯದ ಅಂಗಡಿಯೊಂದರಿಂದ ಖರೀದಿಸಿದ ಅಡುಗೆ ಎಣ್ಣೆಯಲ್ಲಿ ಕಲಬೆರಕೆ ಇರುವದು ಕಂಡು ಬಂದಿದೆ. ಅವರು ಖರೀದಿಸಿದ ಎಣ್ಣೆಯಲ್ಲಿ ಪ್ಲಾಸ್ಟಿಕ್‍ನ ಅಂಶಗಳು ಮತ್ತು ಕಳಪೆ ಗುಣಮಟ್ಟದ ತಾಳೆ ಎಣ್ಣೆ ಬೆರತಿರುವದು ಕಂಡು ಬಂದಿದೆ. ಈ ಎಣ್ಣೆಯನ್ನು ಉಪಯೋಗಿಸಿದಲ್ಲಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಉಂಟಾಗಲಿದೆ.

ಪ್ರತಿಷ್ಠಿತ ಕಂಪೆನಿಯೊಂದರ ಹೆಸರಿಗೆ ಮತ್ತು ಪ್ಯಾಕಿಂಗ್ ಕವರ್‍ಗೆ ಹೋಲುವ ರೀತಿಯಲ್ಲಿ ರಂಗುರಂಗಾಗಿ ಮಾರುಕಟ್ಟೆಗೆ ಬರುತ್ತಿರುವ ಈ ನಕಲಿ ಅಡುಗೆ ಎಣ್ಣೆಯನ್ನು ಸಣ್ಣ ವ್ಯಾಪಾರಿಗಳು ಅಧಿಕ ಲಾಭದ ಆಸೆಗೆ ಖರೀದಿಸುತ್ತಾರೆ.

ಜನತೆಯ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆಯವರು ಮತ್ತು ನಕಲಿ ವಸ್ತುಗಳ ಮಾರಾಟದ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆಯವರು ಸಗಟು ಮಾರಾಟಗಾರರ ಗೋದಾಮುಗಳನ್ನು ಪರೀಕ್ಷೆಗೆ ಒಳಪಡಿಸಬೇಕಿದೆ. ಸಾರ್ವಜನಿಕರು ಬೆಲೆ ಕಡಿಮೆಯ ಆಮಿಷಕ್ಕೆ ಒಳಗಾಗಿ ವಂಚನೆಗೆ ಬೀಳದಂತೆ ಎಚ್ಚರ ವಹಿಸಬೇಕಿದೆ.