ವೀರಾಜಪೇಟೆ ಏ. 9: ಕಳೆದ ಮೂರು ದಿನಗಳಿಂದ ಇಲ್ಲಿನ ತಾಲೂಕು ಮೈದಾನದಲ್ಲಿ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಜಿಲ್ಲಾ ಮಟ್ಟದ ವಾಲಿಬಾಲ್ಪಂದ್ಯಾಟದಲ್ಲಿ ಗುಂಡಿಗೆರೆ ತಂಡ ಪ್ರಥಮ ಸ್ಥಾನ ಪಡೆದಿದ್ದು, ನಗದು ರೂ 33,333 ಮತ್ತು ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಎರಡನೇ ಸ್ಥಾನ ಎಡಪಾಲ ತಂಡ ಗಳಿಸಿದ್ದು ರೂ22,222ನಗದು ಹಾಗೂ ಟ್ರೋಫಿ, ಮೂರನೇ ಸ್ಥಾನ ಪಡೆದ ಕರಿಕೆ ತಂಡ 11,101ನಗದು ಹಾಗೂ ಟ್ರೋಫಿ, ನಾಲ್ಕನೇ ಸ್ಥಾನದಲ್ಲಿದ್ದ ಹುಂಡಿ ತಂಡ ರೂ 5,555 ನಗದು, ಟ್ರೋಫಿ ಪಡೆದುಕೊಂಡಿವೆ.ಪಂದ್ಯಾಟದಲ್ಲಿ ಜಿಲ್ಲೆಯಾದ್ಯಂತ 41 ತಂಡಗಳು ಭಾಗವಹಿಸಿದ್ದವು. ನಿನ್ನೆ ದಿನ ಅಪರಾಹ್ನದಿಂದಲೇ ಪಂದ್ಯಾಟ ಮುಂದುವರೆದಿದ್ದರೂ ಅಂತಿಮ ಪಂದ್ಯಾಟ ಬೆಳಗಿನ ಜಾವ 4-30ರವರೆಗೂ ನಡೆಯಿತು.ಪಂದ್ಯಾಟವನ್ನು ವೀಕ್ಷಿಸಲು ಅಪರಾಹ್ನ 4 ಗಂಟೆಯಿಂದಲೇ ತಾಲೂಕು ಮೈದಾನದಲ್ಲಿ ಕಿಕ್ಕಿರಿದು ವೀಕ್ಷಕರು, ಕ್ರೀಡಾಸಕ್ತರು ನೆರೆದಿದ್ದರು. ತಾಲೂಕು ಮೈದಾನದಲ್ಲಿರುವ ಇಕ್ಕೆಲಗಳಲ್ಲಿ ವಿಶಾಲವಾದ ಗ್ಯಾಲರಿ ಇದ್ದರೂ ಸುಮಾರು 1000 ಮಂದಿಗೂ ಅಧಿಕ ಆಸನದ ಗ್ಯಾಲರಿಯನ್ನು
(ಮೊದಲ ಪುಟದಿಂದ) ವ್ಯವಸ್ಥೆಗೊಳಿಸಲಾಗಿತ್ತು. ಗ್ಯಾಲರಿ ಸಾಲದೆಂಬಂತೆ ರಸ್ತೆಯ ಬದಿ, ಮೈದಾನದ ಇಕ್ಕಟ್ಟು ಜಾಗಗಳಲ್ಲಿ ಜನರು ಫಲಿತಾಂಶಕ್ಕಾಗಿ ಬೆಳಗಿನ ಜಾವದ ತನಕವೂ ಕಾದು ನಿಂತಿದ್ದು ವಿಶೇಷ ಎನಿಸಿತ್ತು. ವಿಜೇತರಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು.
ಸಮಾರೋಪ : ಮನುಷ್ಯನ ಆರೋಗ್ಯ ಕಾಪಾಡಲು ಕ್ರೀಡಾ ಕೂಟವು ಸಹಕಾರಿಯಾಗಲಿದೆ. ರೋಗ ರುಜಿನಗಳ ನಿರೋಧಕ್ಕಾಗಿ ವ್ಯಾಯಾಮ, ನಡೆಯವದಕ್ಕಿಂತಲೂ ಆಟೋಟಗಳಲ್ಲಿ ಭಾಗವಹಿಸಿದರೆ ಆರೋಗ್ಯ ರಕ್ಷಣೆ ಸಾಧ್ಯ ಎಂದು ಕಿತ್ತಳೆ ನಾಡು ವಾರ ಪತ್ರಿಕೆಯ ಸಂಪಾದಕ ಕುವೇಂಡ ಹಂಝತುಲ್ಲಾ ಹೇಳಿದರು.
ಕೊಡಗು ಮುಸ್ಲಿಂ ಸ್ಫೋಟ್ರ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ವತಿಯಿಂದ ಇಲ್ಲಿನ ತಾಲೂಕು ಮೈದಾನದಲ್ಲಿ ಮೂರು ದಿನಗಳಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಅವರು ಭಾರತದ ಪ್ರಥಮ ಪ್ರಧಾನಿ ಮಹಿಳೆ ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ಒಲಂಪಿಕ್ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದ್ದರಿಂದ ಇಂದು ಭಾರತ ದೇಶ ಹಾಗೂ ಜಿಲ್ಲೆಯ ಪ್ರತಿಭೆಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರದಲ್ಲಿ ಪ್ರತಿಭೆಗಳನ್ನು ಪ್ರದರ್ಶಿಸುವಂತಾಗಿ ಕ್ರೀಡಾ ಪ್ರತಿಭೆಗಳಿಗೆ ಎಲ್ಲ ಹಂತಗಳಲ್ಲೂ ಉತ್ತೇಜನ ದೊರೆಯುತ್ತಿದೆ ಎಂದರು.
ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ ಕ್ರೀಡಾ ಅಕಾಡೆಮಿಗಳು ನಗರ ಪ್ರದೇಶಕ್ಕೆ ಮಾತ್ರ ಸೀಮಿತಗೊಂಡಂತೆ ತಾರತಮ್ಯ ಮಾಡಿ ಕಾರ್ಯನಿರ್ವಹಿಸುತ್ತಿವೆ. ಇದರ ಕಾರ್ಯ ವೈಖರಿಯನ್ನು ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಿಸಿದರೆ ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ ಅವಕಾಶ ದೊರೆಯಲಿದೆ. ಈ ಕುರಿತು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಗಮನ ಹರಿಸಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಪಿ.ಎ.ಹನೀಫ್ ಮಾತನಾಡಿ ಹತ್ತು ವರ್ಷಗಳಿಂದ ಸಂಘಟನೆ ವತಿಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಪಂದ್ಯಾಟಗಳನ್ನು ಆಯೋಜಿಸಲಾಗುತ್ತಿದೆ. ಕೇಂದ್ರ, ರಾಜ್ಯ ಸರಕಾರಗಳ ಕ್ರೀಡಾ ಅಕಾಡೆಮಿಗಳು ಪಂದ್ಯಾಟಗಳತ್ತ ಗಮನ ಹರಿಸಿಲ್ಲ. ಸಹಕಾರವನ್ನೂ ನೀಡಿಲ್ಲ, ಮುಸ್ಲಿಂ ಸಮುದಾಯದ ಒಬ್ಬ ಯುವಕ ಅಮೇರಿಕಾದ ಕ್ರೀಡಾ ಸ್ಟೇಡಿಯಂನಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಭಾರತದ ಕ್ರೀಡಾ ಅಕಾಡೆಮಿಯಿಂದ ಆಯ್ಕೆಯಾದಾಗ ಆತ ಮುಸ್ಲಿಂ ಜಾತಿಗೆ ಸೇರಿದವನೆಂದು ಆತನ ವೀಸಾವನ್ನು ಅತಿ ದೊಡ್ಡ ರಾಷ್ಟ್ರವಾದ ಅಮೇರಿಕ ತಿರಸ್ಕರಿಸಿದೆ. ಇದರಿಂದ ಸಮುದಾಯ ತೀವ್ರ ಆತಂಕಕ್ಕೊಳಗಾಗಿದೆ. ಇದು ನ್ಯಾಯ ಸಮ್ಮತವಲ್ಲ. ಪ್ರತಿಭೆ ಎನ್ನುವದು ಒಂದು ಜನಾಂಗಕ್ಕೆ ಸೀಮಿತವಲ್ಲ. ಎಂದು ನೋವಿನಿಂದ ನುಡಿದರು. ಸಮಾರಂಭದಲ್ಲಿ ಕಳೆದ 36 ವರ್ಷಗಳಿಂದ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಿಕೊಂಡು ಬರುತ್ತಿರುವ ವಾಲಿಬಾಲ್ ಪಟು ಕರೀಂ ಹಾಗೂ ಸಂಘಟನೆಯ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್ ಅವರನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಸಂಘಟನೆಯ ಮಾಜಿ ಅಧ್ಯಕ್ಷ ಕುಂಞÂ ಅಬ್ದುಲ್ಲಾ, ಪಿ.ಎಂ. ಕಾಸಿಂ, ಕೊಡವ ಮುಸ್ಲಿಂ ಅಸೋಸಿಯೇಶನ್‍ನ ಅಧ್ಯಕ್ಷ ಡಿ.ಎಚ್.ಸೂಫಿ ಹಾಜಿ, ಉದ್ಯಮಿ ಎಡಪಾಲ ಹ್ಯಾರೀಸ್, ಕೊಟ್ಟಮುಡಿ ಹಂಸ, ಕೆ.ಎಚ್. ಅಬ್ದುಲ್ ರೆಹಮಾನ್ ಸಂಘಟನೆಯ ನಿರ್ದೇಶಕ ನಾಪೋಕ್ಲಿನ ಮನ್ಸೂರ್ ಆಲಿ, ಎಂ.ವೈ ಆಲಿ, ಶಾಫಿ, ನಾಸರ್ ಮಕ್ಕಿü ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಎಂ.ಎಂ.ಇಸ್ಮಾಯಿಲ್ ಸ್ವಾಗತಿಸಿದರು. ವೈ.ಎಚ್.ಜಂಶೀರ್ ನಿರೂಪಿಸಿದರು.