ಸಿದ್ದಾಪುರ, ಏ. 9: ಪ್ರತಿಷ್ಠಿತ ಕೊಡಗು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಎ ಗುಂಪಿನ ಎರಡು ತಂಡಗಳು ಅಂತಿಮ ನಾಲ್ಕನೇ ಸುತ್ತಿಗೆ ಆಯ್ಕೆಯಾಗಿವೆ.

ಸಿದ್ದಾಪುರದ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತ್ತಿರುವ ಕೆ.ಸಿ.ಎಲ್. ಪಂದ್ಯಾವಳಿಯ 2ನೇ ದಿನದಂದು 6 ತಂಡಗಳ ನಡುವೆ ನಡೆದ ಲೀಗ್ ಪಂದ್ಯಾವಳಿಯು ಪ್ರೇಕ್ಷಕರಿಗೆ ರಸದೌತಣ ನೀಡಿತು. ಎ ಗುಂಪಿನಲ್ಲಿ ರಾಯಲ್ಸ್ ವೀರಾಜಪೇಟೆ ತಂಡವು 5 ಪಂದ್ಯಗಳಲ್ಲಿ 4 ಗೆಲುವು ಹಾಗೂ 1 ಸಮಬಲದ ನೆರವಿನಿಂದ 9 ಅಂಕಗಳನ್ನು ಪಡೆದು ಅಗ್ರಸ್ಥಾನಕ್ಕೇರಿತು. ಕ್ರಿಯೇಟಿವ್ ಚಾಣಕ್ಯ ಮಡಿಕೇರಿ ತಂಡವು5 ಪಂದ್ಯಗಳಲ್ಲಿ 3 ಗೆಲುವು 1 ಸೋಲು ಹಾಗೂ 1 ಸಮಬಲದ ನೆರವಿನಿಂದ ಒಟ್ಟು 7 ಅಂಕವನ್ನು ಪಡೆದು ದ್ವಿತೀಯ ಸ್ಥಾನಕ್ಕೇರಿದೆ.

ರಾಯಲ್ಸ್ ವೀರಾಜಪೇಟೆ ಮತ್ತು ಮಡಿಕೇರಿಯ ಕ್ರಿಯೇಟಿವ್ ಚಾಣಕ್ಯ ತಂಡಗಳ ನಡುವೆ ನಡೆದ ರೋಮಾಂಚನಕಾರಿ ಪಂದ್ಯಾಟ ಸಮಬಲದಲ್ಲಿ ಅಂತ್ಯಗೊಂಡಿತು. ಕೂರ್ಗ್ ಲಯನ್ಸ್ ಸಿದ್ದಾಪುರ ತಂಡದ ಎದುರು ಕೂರ್ಗ್ ಫ್ರೆಂಡ್ಸ್ ತಂಡ ಗೆಲುವು ಸಾಧಿಸಿತು. ಸ್ಪೋಟ್ರ್ಸ್ ವಲ್ರ್ಡ್ ಮಡಿಕೇರಿ ತಂಡದ ಎದುರು ಕ್ರಿಯೇಟಿವ್ ಚಾಣಕ್ಯ, ನೆಲ್ಯಹುದಿಕೇರಿಯ ಝಲ್ಲಾ ಕ್ರಿಕೆಟರ್ಸ್ ಎದುರು ಕೂರ್ಗ್ ಲಯನ್ಸ್, ಕೂರ್ಗ್ ಫ್ರೆಂಡ್ಸ್, ತ್ಯಾಗತ್ತೂರು ಎದುರು ರಾಯಲ್ಸ್ ವೀರಾಜಪೇಟೆ, ಝಲ್ಲಾ ನೆಲ್ಯಹುದಿಕೇರಿ ಎದುರು ಸ್ಪೋಟ್ರ್ಸ್ ವಲ್ರ್ಡ್ ಮಡಿಕೇರಿ, ಕ್ರಿಯೇಟಿವ್ ಚಾಣಕ್ಯ ಎದುರು ಕೂರ್ಗ್ ಲಯನ್ಸ್, ಸ್ಪೋಟ್ರ್ಸ್ ವಲ್ರ್ಡ್ ಎದುರು ರಾಯಲ್ಸ್ ವೀರಾಜಪೇಟೆ, ಝಲ್ಲಾ ಕ್ರಿಕೆಟರ್ಸ್ ಎದುರು ಕ್ರಿಯೇಟಿವ್ ಚಾಣಕ್ಯ ಗೆಲುವು ಸಾಧಿಸಿತು.

ಐ.ಪಿ.ಎಲ್ ಮಾದರಿಯಲ್ಲಿ ಪಂದ್ಯಾವಳಿ ನಡೆಯುತ್ತಿದ್ದು, ತಲಾ 2 ತಂಡ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್‍ಗಳಾಗಿ ಆಯ್ಕೆಯಾಗಲಿವೆ. ಅತಿ ಹೆಚ್ಚು ಅಂಕ ಗಳಿಸಿದ ತಂಡ ಹಾಗೂ ಎರಡನೇ ಹೆಚ್ಚು ಅಂಕ ಗಳಿಸಿದ ತಂಡಗಳ ನಡುವೆ ಫೈನಲ್‍ಗೇರಲು ಪಂದ್ಯಾಟ ನಡೆಯಲಿದೆ. ಇದರಲ್ಲಿ ಸೋಲುವ ತಂಡ 3 ಮತ್ತು 4 ನೇ ಸ್ಥಾನದ ತಂಡದಲ್ಲಿ ಗೆಲ್ಲುವ ತಂಡದ ಜೊತೆ ಮತ್ತೊಂದು ಪಂದ್ಯಾಟ ಆಡುವ ಅವಕಾಶವಿದ್ದು, ಗೆಲ್ಲುವ ತಂಡ ಫೈನಲ್‍ಗೆ ಏರಲಿದೆ.

ತಾ. 12 ರಂದು ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಾವಳಿ ನಡೆಯಲಿದ್ದು, ಅಂದೇ ಫೈನಲ್ ಪಂದ್ಯಾಟ ನಡೆಯಲಿದೆ. ಬಿ ಗುಂಪಿನ ಪಂದ್ಯಾಟವು ತಾ. 10 ರಿಂದ (ಇಂದಿನಿಂದ) ನಡೆಯಲಿದೆ.