ವೀರಾಜಪೇಟೆ, ಏ. 8: ಐದು ವರ್ಷಗಳ ಹಿಂದೆ ಬಿಜೆಪಿಯ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿದ್ದ ಸುಜಾ ಕುಶಾಲಪ್ಪ ಅವರನ್ನು ಗುಂಡು ಹಾರಿಸಿ ಕೊಲೆಗೆ ಪ್ರಯತ್ನಿಸಿ ಈ ತನಕ ತಲೆಮರೆಸಿಕೊಂಡಿದ್ದ ಜಕ್ರಿಯಾ ಅಲಿಯಾಸ್ ಜಕ್ಕಿ ಎಂಬಾತನನ್ನು ವೀರಾಜಪೇಟೆ ನಗರ ಪೊಲೀಸರು ಇಂದು ಬೆಳಿಗ್ಗೆ ಕುಶಾಲನಗರದಲ್ಲಿ ಬಂಧಿಸಿದ್ದಾರೆ.

ಕಳೆದ ತಾ. 9.1.2014ರಂದು ಅಪರಾಹ್ನ 1.30ರ ಸಮಯದಲ್ಲಿ ಇಲ್ಲಿನ ಗೋಣಿಕೊಪ್ಪ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಸುಜಾ ಕುಶಾಲಪ್ಪ ಅವರು ಕಾರಿನಿಂದ ಇಳಿಯುತ್ತಿದ್ದಾಗ ಗುಂಡು ಹಾರಿಸಿ ಕೊಲೆಗೆ ಯತ್ನಿಸಲಾಗಿತ್ತು. ಈ ಸಂಬಂಧ ಪೊಲೀಸರು 16 ಮಂದಿಯ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿ 16ನೇ ಆರೋಪಿಯ ಶೋಧನೆಯಲ್ಲಿ ತೊಡಗಿದ್ದರು.ವೀರಾಜಪೇಟೆ ನಗರ ಪೊಲೀಸ್ ಠಾಣೆಯ ಅಪರಾಧ ತನಿಖಾ ದಳದ ತಂಡ ಜಕ್ರಿಯಾನ ವಿಳಾಸ ಪತ್ತೆ ಹಚ್ಚಿ ಕೆಲವು ದಿನಗಳಿಂದ ಈತನ ಚಲನ ವಲನಗಳ ನಿಗಾ ವಹಿಸಿ ಖಚಿತ ಸುಳಿವಿನ ಮೇರೆ ಇಂದು ಕುಶಾಲನಗರದ ಬಸ್ಸು ನಿಲ್ದಾಣ ಬಳಿ ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆ ತಂದಿದ್ದಾರೆ.

ಆರೋಪಿ ಜಕ್ರಿಯಾ ಮೂಲತಃ ಸೋಮವಾರಪೇಟೆ

(ಮೊದಲ ಪುಟದಿಂದ) ತಾಲೂಕಿನ ತಣ್ಣೀರುಹಳ್ಳ್ಳ ಗ್ರಾಮದವನಾಗಿದ್ದು ಕೊಲೆಗೆ ಕಾರು ಹಾಗೂ ಇತರ ಪರಿಕರಗಳನ್ನು ನೀಡಿ ಸಹಕರಿಸಿದ್ದನೆಂದು ಪೊಲೀಸರು ಹೇಳಿದ್ದಾರೆ. ಡಿವೈಎಸ್‍ಪಿ ನಾಗಪ್ಪ ಅವರ ನಿರ್ದೇಶನದ ಮೇರೆಗೆ ಎಸ್.ಐ ಸಂತೋಷ್ ಕಶ್ಯಪ್, ಸಿಬ್ಬಂದಿಗಳಾದ ಮುನೀರ್, ಜಗದೀಶ್ ಆರೋಪಿ ಪತ್ತೆಗೆ ಸಹಕರಿಸಿದ್ದಾರೆ.