ಮಡಿಕೇರಿ, ಏ. 8: ಮತದಾರರ ಪಟ್ಟಿಗೆ ಅರ್ಹರು ತಮ್ಮ ಹೆಸರು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾರರ ‘ಮಿಂಚಿನ ನೋಂದಣಿ’ ಅಭಿಯಾನಕ್ಕೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಚಾಲನೆ ನೀಡಿದರು. ನಗರದ ಸಂತ ಜೋಸೆಫರ ಕಾಲೇಜಿನಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವ ನಿಟ್ಟಿನಲ್ಲಿ 18 ವರ್ಷ ಪೂರ್ಣಗೊಂಡ ವರಿಗೆ ನಮೂನೆ-6 ಅರ್ಜಿಯನ್ನು ವಿತರಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಚುನಾವಣಾ ಅಯೋಗದ ನಿರ್ದೇಶನ ದಂತೆ ಜಿಲ್ಲೆಯ 530 ಮತಗಟ್ಟೆಗಳಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನವನ್ನು ಹಮ್ಮಿ ಕೊಳ್ಳಲಾ ಗಿದ್ದು, ಈ ಅವಕಾಶವನ್ನು ಅರ್ಹರು ಪಡೆದುಕೊಳ್ಳುವಂತೆ ಕೋರಿದರು. ಹದಿನೆಂಟು ವರ್ಷ ಪೂರ್ಣಗೊಂಡು ಇದುವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗದಿದ್ದಲ್ಲಿ, ಮತದಾರರ ಪಟ್ಟಿಯಲ್ಲಿ ಹಲವು ಕಾರಣಗಳಿಂದ ಹೆಸರು ಬಿಟ್ಟು ಹೋಗಿರುವವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ, ಮತದಾನದ ಗುರುತಿನ ಚೀಟಿ ಪಡೆಯುವಂತೆ ಮನವಿ ಮಾಡಿದರು. ಹೆಸರು ನೋಂದಾಯಿಸಿದವರಿಗೆ ಶೀಘ್ರ ಮತದಾರರ ಗುರುತಿನ ಚೀಟಿ ನೀಡಲಾಗುವದು, 18 ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಯಿಂದ ವಂಚಿತರಾಗಬಾರದು ಎಂದರು. ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಅರ್ಹರೆಲ್ಲರೂ ಮತದಾರರ ಗುರುತಿನ ಚೀಟಿ ಪಡೆದು, ಮತದಾನ ಮಾಡುವಂತರಾಗಬೇಕು ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಹೇಳಿದರು.

ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ. ಆ ನಿಟ್ಟಿನಲ್ಲಿ ಮತದಾರರ ಮಿಂಚಿನ ನೋಂದಣಿ ವಿಶೇಷ ಅಭಿಯಾನವನ್ನು ಸಹ ಹಮ್ಮಿಕೊಳ್ಳಲಾ ಗಿದ್ದು, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅರ್ಹರಲ್ಲಿ ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್ ಮಾತನಾಡಿ,

(ಮೊದಲ ಪುಟದಿಂದ) ಈ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತಾಗಲು 18 ವರ್ಷ ಪೂರ್ಣಗೊಂಡವರಿಗೆ ಮತದಾರರ ಗುರುತಿನ ಚೀಟಿ ಪಡೆಯುವಂತಾಗಲು ಮಿಂಚಿನ ನೋಂದಣಿ ಅಭಿಯಾನ ಆಯೋಜಿಸಲಾಗಿದೆ. ಆ ದಿಸೆಯಲ್ಲಿ ಅರ್ಹರು ಬೂತ್ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ ಹೆಸರು ನೋಂದಾಯಿಸಿ ಕೊಳ್ಳುವಂತಾಗ ಬೇಕು. ಈ ಅವಕಾಶವು ತಾ. 14 ರವರೆಗೆ ಇದೆ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ರಮೇಶ್ ಕೊನರೆಡ್ಡಿ ಅವರು ಮಾತನಾಡಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಮತದಾನವು ಪರಿಣಾಮಕಾರಿ ಸಾಧನವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ತಹಶೀಲ್ದಾರ್ ಶಾರದಾಂಭ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಪೌರಾಯುಕ್ತೆ ಬಿ.ಶುಭ ಇತರರು ಇದ್ದರು.

ಇನ್ನಷ್ಟು ಮಾಹಿತಿ: ಮತದಾರರ ಮಿಂಚಿನ ನೋಂದಣಿ ಅಭಿಯಾನ ಸಂದರ್ಭದಲ್ಲಿ ವಯಸ್ಸಿನ ಬಗ್ಗೆ ದಾಖಲೆಗಳು: ಶಾಲಾ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾಸ್ ಪೋರ್ಟ್, ಎಸ್.ಎಸ್.ಎಲ್.ಸಿ/ಪಿ.ಯು.ಸಿ ಅಂಕಪಟ್ಟಿ, ಪಾನ್ ಕಾರ್ಡ್ ಹಾಗೂ ವೈದ್ಯಕೀಯ ಪ್ರಮಾಣ ಪತ್ರ.

ಸೋಮವಾರಪೇಟೆ: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವತಿಯಿಂದ ಕಡ್ಡಾಯ ಮತದಾನ ಜಾಗೃತಿ ಅಭಿಯಾನ ನಡೆಯಿತು.

ಗ್ರಾ.ಪಂ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಫಲಕಗಳನ್ನು ಹಿಡಿದು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಮೇಶ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ಕುಶಾಲನಗರ: ಮತದಾರರ ಪಟ್ಟಿಗೆ ಹೊಸ ಮತದಾರರ ಸೇರ್ಪಡೆ ಮತ್ತು ತಿದ್ದುಪಡಿ ಹಾಗೂ ವರ್ಗಾವಣೆಗಾಗಿ ಕುಶಾಲನಗರದ ಚುನಾವಣಾ ಬೂತ್‍ಗಳಲ್ಲಿ ಮಿಂಚಿನ ನೋಂದಾವಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಪಟ್ಟಣದ ನಾಡಕಚೇರಿ, ಮಹಿಳಾ ಸಮಾಜ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಬೂತ್‍ಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಮತದಾರರ ಸೇರ್ಪಡೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಬೆಳಗ್ಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕರು ಆಯಾ ಮತ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯವಿರುವ ದಾಖಲೆಗಳನ್ನು ನೀಡುವ ಮೂಲಕ ತಮ್ಮ ಹೆಸರನ್ನು ಅರ್ಜಿ ಮೂಲಕ ನೀಡುತ್ತಿದ್ದ ದೃಶ್ಯ ಕಂಡುಬಂತು.

ಬೂತ್ ವ್ಯಾಪ್ತಿಯಲ್ಲಿ ಮನೆ ಬದಲಾವಣೆ, ಹೆಸರು ಬಿಟ್ಟುಹೋದ ವ್ಯಕ್ತಿಗಳು ಸಂಬಂಧಿಸಿದ ನಮೂನೆ ಅರ್ಜಿಗಳಲ್ಲಿ ವಿವರ ಸಲ್ಲಿಸುವ ಮೂಲಕ ಜಿಲ್ಲೆಯಲ್ಲಿ ನಡೆದ ಮಿಂಚಿನ ನೋಂದಣಿ ಕಾರ್ಯದಲ್ಲಿ ಪಾಲ್ಗೊಂಡರು.

ಸುಂಟಿಕೊಪ್ಪ: ಚುನಾವಣಾ ಆಯೋಗದ ಆದೇಶದ ಹಿನ್ನೆಲೆ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳ ಸಹಯೋಗ ದೊಂದಿಗೆ ಮತ ಗಟ್ಟೆಗಳಲ್ಲಿ ನೂತನ ಮತದಾರರ ಗುರುತಿನ ಚೀಟಿಗೆ ಹೆಸರು ನೋಂದಾವಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮತದಾನ ಪವಿತ್ರ ಹಕ್ಕು; 18 ವರ್ಷ ತುಂಬಿದ ಪ್ರತಿಯೊಬ್ಬರೂ ಚುನಾವಣೆ ಅಧಿಕಾರಿಗೆ ದಾಖಲೆ ನೀಡಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಮತದಾನಹಕ್ಕು ಪಡೆದ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಕಂದಾಯ ಇಲಾಖೆಯ ಪ್ರಭಾರ ಉಪತಹಶೀಲ್ದಾರ್ ಶಿವಪ್ಪ ಹೇಳಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಪಿಡಿಓ ಮೇದಪ್ಪ, ಉಲುಗುಲಿ ಗ್ರಾಮಲೆಕ್ಕಿಗ ಯಶವಂತ್, ವಿವಿಧ ಮತಗಟ್ಟೆಗಳ ಬಿಎಲ್‍ಓ ಅವರುಗಳು ಹಾಜರಿದ್ದರು.