ಮಡಿಕೇರಿ, ಏ. 8: ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಈ ಬಾರಿ ಹೊಸತೊಂದು ಮೈಲಿಗಲ್ಲು ನಿರ್ಮಾಣವಾಗಿದೆ. ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ನಲ್ಲಿ ಸ್ಥಾನ ಪಡೆದಿರುವ ಈ ಪಂದ್ಯಾವಳಿ ಇದೀಗ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ.ಈ ಬಾರಿ ಏಪ್ರಿಲ್ 15 ರಿಂದ ನಾಪೋಕ್ಲುವಿನಲ್ಲಿ ನಡೆಯಲಿರುವ ಕುಲ್ಲೇಟಿರ ಕಪ್ ಹಾಕಿ ಉತ್ಸವಕ್ಕೆ ದಾಖಲೆಯ 327 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಈ ಮೂಲಕ 22 ವರ್ಷದ ಹಾಕಿ ಇತಿಹಾಸದಲ್ಲಿ ಅತಿಹೆಚ್ಚು ಕುಟುಂಬ ತಂಡಗಳು ಪಾಲ್ಗೊಳ್ಳುತ್ತಿರುವ ಪಂದ್ಯಾವಳಿ ಇದಾಗಲಿದೆ. 1997ರಲ್ಲಿ ಪಾಂಡಂಡ ಎಂ. ಕುಟ್ಟಪ್ಪ ಹಾಗೂ ಕಾಶಿ ಸಹೋದರರ ಕನಸಿನಂತೆ ಕರಡ ಗ್ರಾಮದಲ್ಲಿ ಕೊಡವ ಕುಟುಂಬಗಳ ನಡುವೆ ಹಾಕಿ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು, ಆರಂಭದ ವರ್ಷವೇ 60 ಕುಟುಂಬಗಳು ಪಾಲ್ಗೊಂಡಿದ್ದವು. ನಂತರದ ವರ್ಷಗಳಲ್ಲಿ ತಂಡಗಳ ಸಂಖ್ಯೆ ಹೆಚ್ಚುತ್ತಾ ಸಾಗಿದ್ದು, 2003ರಲ್ಲಿ ಪ್ರಥಮ ಬಾರಿಗೆ ನಾಪೋಕ್ಲುವಿನಲ್ಲಿ ನಡೆದ ಕಲಿಯಂಡ ಕಪ್ನಲ್ಲಿ 280 ಕುಟುಂಬಗಳು ಪಾಲ್ಗೊಂಡಿದ್ದವು. ಇದಾದ ನಂತರ ಕಾರಣಾಂತರ ಗಳಿಂದ ತಂಡಗಳ ಸಂಖ್ಯೆ ಕಡಿಮೆ ಯಾಗಿತ್ತಾದರೂ (ಮೊದಲ ಪುಟದಿಂದ) ಸರಾಸರಿ 230 ರಿಂದ 250 ತಂಡಗಳು ವರ್ಷಂಪ್ರತಿ ಪಾಲ್ಗೊಂಡಿವೆ.2016ರಲ್ಲಿ ಮಡಿಕೇರಿಯಲ್ಲಿ ನಡೆದ ಶಾಂತೆಯಂಡ ಕಪ್ನಲ್ಲಿ ಶಾಂತೆಯಂಡ ಕುಟುಂಬದವರು ತಮ್ಮ ಪ್ರಯತ್ನದಿಂದ ತಂಡಗಳ ಸಂಖ್ಯೆಯಲ್ಲಿ 299ಕ್ಕೆ ಹೆಚ್ಚಿಸಿದರೆ, ಕಳೆದ ವರ್ಷವಷ್ಟೇ ನಾಪೋಕ್ಲುವಿನಲ್ಲೇ ನಡೆದ ಬಿದ್ದಾಟಂಡ ಕಪ್ನಲ್ಲಿ 306 ತಂಡಗಳನ್ನು ಸೇರಿಸುವ ಮೂಲಕ ಬಿದ್ದಾಟಂಡ ಕುಟುಂಬಸ್ಥರು ತಂಡಗಳ ಸಂಖ್ಯೆಯನ್ನು 300ರ ಗಡಿ ದಾಟಿಸಿದ್ದರು. ಇದೀಗ ಕುಲ್ಲೇಟಿರ ಕುಟುಂಬ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. 2018ರ ಏಪ್ರಿಲ್ 15 ರಿಂದ ಒಂದು ತಿಂಗಳ ಕಾಲ ನಾಪೋಕ್ಲುವಿನಲ್ಲಿ ನಡೆಯಲಿರುವ ಕುಲ್ಲೇಟಿರ ಕಪ್ ಹಾಕಿ ಉತ್ಸವದಲ್ಲಿ ಬರೋಬ್ಬರಿ 327 ಕುಟುಂಬ ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ಕೌಟುಂಬಿಕ ಹಾಕಿ ಇತಿಹಾಸದಲ್ಲಿ ಹೊಸತೊಂದು ಇತಿಹಾಸ ಸೃಷ್ಟಿಯಾಗುತ್ತಿದೆ. ತಂಡಗಳ ನೋಂದಣಿ ಅಂತಿಮಗೊಂಡಿದ್ದು, ಟೈಸ್ ಕೂಡ ಮುಕ್ತಾಯದ ಹಂತದಲ್ಲಿರುವದಾಗಿ ಸಂಘಟಕರು ತಿಳಿಸಿದ್ದಾರೆ.