ವರದಿ: ಎ.ಎನ್ ವಾಸುಸಿದ್ದಾಪುರ, ಏ. 8: ಕೊಡಗು ಚಾಂಪಿಯನ್ಸ್ ಲೀಗ್ ಪಂದ್ಯಾವಳಿಗೆ ಅದ್ಧೂರಿ ಚಾಲನೆ ದೊರಕಿದೆ. ಸಿದ್ದಾಪುರ ಪ್ರೌಢಶಾಲಾ ಮೈದಾನದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೈದಾನ ಉದ್ಘಾಟಿಸಿ ಮಾತನಾಡಿದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನ ಮೈಸೂರು ವಿಬಾಗ ಪ್ರಧಾನ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ದೇಶದ ರಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೊಡುಗೆ ನೀಡಿರುವ ಕೊಡಗು ಜಿಲ್ಲೆ ದೇಶಕ್ಕೆ ಹಲವಾರು ಕ್ರೀಡಾಪಟುಗಳನ್ನು ಕೂಡ ನೀಡಿದೆ. ಗ್ರಾಮೀಣ ಭಾಗದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಹೊರತರಲು ಕೆ.ಸಿ.ಎಲ್. ಕ್ರೀಡಾಕೂಟ ಉತ್ತಮ ವೇದಿಕೆಯಾಗಿದೆ. ಕ್ರೀಡೆಯೊಂದಿಗೆ ದೇಶಪ್ರೇಮವನ್ನು ಬೆಳೆಸಬೇಕೆಂದು ಕರೆ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ಸಿಟಿ ಬಾಯ್ಸ್ ಯುವಕ ಸಂಘವು ಯುವ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕೆ.ಸಿ.ಎಲ್ ಪಂದ್ಯಾಟ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದೆ ಎಂದರು.

ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಭಾರತ ದೇಶವು ಶ್ರೀಮಂತ ಸಂಸ್ಕøತಿಯನ್ನು ಹೊಂದಿರುವ ದೇಶ; ಸಂಸ್ಕøತಿಯೇ ದೇಶದ ಸಂಪತ್ತು. ದೇಶದ ಗ್ರಾಮೀಣ ಬಾಗದಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳಿದ್ದರೂ, ನಗರ ಪ್ರದೇಶದ ಪ್ರತಿಭೆಗಳಿಗೆ ಮಾತ್ರ ಹೆಚ್ಚು ಅವಕಾಶಗಳು ದೊರೆಯುತ್ತಿದೆ. ಗ್ರಾಮೀಣ ಬಾಗದ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಕೊಡಗು ಚಾಂಪಿಯನ್ಸ್ ಲೀಗ್‍ನ ರೀತಿಯ ಕ್ರೀಡಾಕೂಟಗಳಿಂದ ಗ್ರಾಮೀಣ ಪ್ರತಿಭೆಗಳಿಗೂ ಗುರುತಿಸಿ ಕೊಳ್ಳುವ ಅವಕಾಶ ದೊರೆಯುತ್ತಿದೆ ಎಂದರು. ಕ್ರೀಡೆಯೊಂದಿಗೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಸಿಟಿ ಬಾಯ್ಸ್ ಸಂಘಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಕೊಡಗು ಪ್ರೆಸ್ ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ,

(ಮೊದಲ ಪುಟದಿಂದ) ಕ್ರೀಡೆಗಳಲ್ಲಿ ರಾಜಕೀಯ ಬೆರೆಸಬಾರದು. ರಾಜಕೀಯದಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳುವದು ಉತ್ತಮ. ಕೆ.ಸಿ.ಎಲ್ ಕ್ರೀಡಾಕೂಟ ಯುವ ಆಟಗಾರರಿಗೆ ಉತ್ತಮ ವೇದಿಕೆಯಾಗಿದೆ ಎಂದರು.

ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ, ವಿಶ್ವದಲ್ಲೇ ಹೆಚ್ಚು ಯುವ ಜನತೆ ಹೊಂದಿರುವ ನಮ್ಮ ದೇಶದಲ್ಲಿ ಕ್ರೀಡೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. 80ರ ದಶಕಗಳಲ್ಲಿ ಕ್ರಿಕೆಟ್ ಕೇವಲ ಶ್ರೀಮಂತರ ಆಟವಾಗಿತ್ತು. ಬಡವರು ಕೇವಲ ವೀಕ್ಷಕರಾಗಿ ಇರುತ್ತಿದ್ದರು. ಆದರೇ ಇದೀಗ ಪ್ರತಿಯೊಬ್ಬರೂ ಕ್ರಿಕೆಟ್ ಆಡಲು ಅವಕಾಶ ದೊರೆತಿದೆ ಎಂದರು. ಇತ್ತೀಚೆಗಿನ ದಿನಗಳಲ್ಲಿ ಜಾತಿಗಳ, ಧರ್ಮಗಳ, ಪಂಗಡಗಳ ಆದಾರದಲ್ಲಿ ಕ್ರೀಡಾಕೂಟಗಳು ನಡೆಯುತ್ತಿರುವದು ವಿಷಾದನೀಯ ಎಂದರು.

ವೇದಿಕೆಯಲ್ಲಿ ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷ ಎಂ.ಕೆ. ಮಣಿ, ಸದಸ್ಯರಾದ ಅಬ್ದುಲ್ ಖಾದರ್, ಹುಸೈನ್, ಅಬ್ದುಲ್ ಶುಕೂರ್, ಕೆ.ಸಿ.ಎಲ್. ಸಂಚಾಲಕ ಸುರೇಶ್ ಬಿಳಿಗೆರಿ, ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ, ಜಿಮ್ಮಿ ಸಿಕ್ವೇರಾ ಸೇರಿದಂತೆ ಇನ್ನಿತರರು ಇದ್ದರು. ಎಂ.ಎ. ಅಜೀಜ್ ಸ್ವಾಗತಿಸಿ ರೆಜಿತ್ ಕುಮಾರ್ ಗುಹ್ಯ ನಿರೂಪಿಸಿದರು.

ಕೆ.ಸಿ.ಎಲ್.ನ ಪ್ರದರ್ಶನ ಪಂದ್ಯಾಟ ಕೊಡಗು ಜಿಲ್ಲಾ ಪತ್ರಕರ್ತರ ತಂಡ ಹಾಗೂ ಕೆ.ಸಿ.ಎಲ್. ಸಮಿತಿಯ ನಡುವೆ ನಡೆಯಿತು. ಪ್ರದರ್ಶನ ಪಂದ್ಯಾಟದಲ್ಲಿ ಕೆ.ಸಿ.ಎಲ್. ಸಮಿತಿಯನ್ನು ಮಣಿಸಿ ಕೊಡಗು ಪತ್ರಕರ್ತರ ತಂಡ ಗೆಲುವು ಸಾಧಿಸಿತು. ಪಂದ್ಯಾವಳಿಯ ಎ ಗುಂಪಿನ ಒಟ್ಟು ಆರು ತಂಡಗಳು ಲೀಗ್ ಹಂತದಲ್ಲಿ ಕಾದಾಟ ನಡೆಸಿದವು. ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶದ ನೂರಾರು ಮಂದಿ ಕ್ರೀಡಾಪ್ರೇಮಿಗಳು ಪಂದ್ಯಾಟವನ್ನು ವೀಕ್ಷಿಸಿದರು.