ಸೋಮವಾರಪೇಟೆ, ಏ. 8: ಪ್ರತಿಯೊಬ್ಬ ನಾಗರಿಕನೂ ಸಹ ತನ್ನ ಜವಾಬ್ದಾರಿಯನ್ನು ಅರಿತು ಮತದಾನ ಮಾಡಬೇಕು. ಮತದಾನ ಮಾಡದಿರುವ ತೀರ್ಮಾನಕ್ಕೆ ಯಾರೂ ಬರಬಾರದು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್. ಕರಿಯಪ್ಪ ರೈ ಕರೆ ನೀಡಿದರು.
ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ನಡೆದ ಮತದಾರರ ಜಾಗೃತಿ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಲೇಜಿನ ಪ್ರಬಾರ ಪ್ರಾಂಶುಪಾಲ ಪ್ರೊ. ಶ್ರೀಧರ್ ಮಾತನಾಡಿ, ಯುವ ಜನಾಂಗ ಯಾವದೇ ಪಕ್ಷಗಳ ಆಮಿಷಗಳಿಗೆ ಒಳಗಾಗದೇ ಪ್ರಾಮಾಣಿಕತೆಯಿಂದ ಮತ ಚಲಾಯಿಸಬೇಕು ಎಂದರು. ಯುವ ಮತದಾರರ ನೋಂದಣಿ ಅಧಿಕಾರಿ ಪ್ರೊ. ಹೆಚ್.ಎನ್. ರಾಜು ಅವರು, ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಸಿಕೊಳ್ಳುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿನಿಯರಾದ ಎ.ಡಿ. ಯೋಗಿತ ಪ್ರಾರ್ಥಿಸಿ, ಯಶಸ್ವಿನಿ ನಿರೂಪಿಸಿ, ಪ್ರಾಧ್ಯಾಪಕಿ ಪ್ರೊ. ಕೆ.ಹೆಚ್. ಧನಲಕ್ಷ್ಮಿ ಸ್ವಾಗತಿಸಿದರು.