ಮಡಿಕೇರಿ, ಏ. 8: ಕೊಡಗು ಜಿಲ್ಲೆಯ ಮಹಿಳೆಯರಲ್ಲಿ ಫುಟ್ಬಾಲ್ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕೂರ್ಗ್ ವುಮೆನ್ಸ್ ಸಾಕರ್ ಕ್ಲಬ್ನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಆಸಕ್ತ ಫುಟ್ಬಾಲ್ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಫುಟ್ಬಾಲ್ ತರಬೇತುದಾರ ಎಂ.ಇಬ್ರಾಹಿಂ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕ್ಲಬ್ನ ಮೂಲಕ ಮಹಿಳೆಯರಿಗಾಗಿಯೇ ಪಂದ್ಯಾವಳಿಯೊಂದನ್ನು ಆಯೋಜಿಸುವ ಗುರಿ ಹೊಂದಲಾಗಿತ್ತು. ಆದರೆ ಇದಕ್ಕೆ ಸುಮಾರು 10 ಮಹಿಳಾ ತಂಡಗಳಾದರೂ ಬೇಕಿದೆ. ಆದರೆ ಜಿಲ್ಲೆಯಲ್ಲಿ ಅಷ್ಟೊಂದು ತಂಡಗಳು ಇಲ್ಲದಿರುವದರಿಂದ ಪ್ರಸಕ್ತ 40 ವರ್ಷ ಮೇಲ್ಪಟ್ಟ ಪುರುಷರ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಆ ಮೂಲಕ ಕೊಡಗಿನ ಹಳೆಯ ಫುಟ್ಬಾಲ್ ಕಲಿಗಳನ್ನು ಒಂದೆಡೆ ಸೇರಿಸಿ ಆಡಿಸುವದರೊಂದಿಗೆ ಮಹಿಳಾ ಫುಟ್ಬಾಲ್ ಕ್ರೀಡೆಯನ್ನು ಜನಪ್ರಿಯಗೊಳಿಸಲು ಯೋಜನೆ ರೂಪಿಸಿರುವದಾಗಿ ಇಬ್ರಾಹಿಂ ಹೇಳಿದರು.
ಕ್ಲಬ್ನ ವ್ಯವಸ್ಥಾಪಕಿ ಬಡುವಂಡ್ರ ಕವಿತಾ ಬೆಳ್ಯಪ್ಪ ಮಾತನಾಡಿ, ತಾ. 9 ಮತ್ತು 10 ರಂದು ಮರಗೋಡು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ 40 ವರ್ಷ ಮೇಲ್ಪಟ್ಟ ಪುರುಷರ ಫುಟ್ಬಾಲ್ ಪಂದ್ಯಾವಳಿ ಯನ್ನು ಕೊಡಗು ಫುಟ್ಬಾಲ್ ಅಸೋಸಿಯೇಷನ್ ಸಹಯೋಗ ದೊಂದಿಗೆ ಆಯೋಜಿಸಲಾಗಿದೆ ಎಂದರು. ಸುಮಾರು 15 ತಂಡಗಳು ಭಾಗವಹಿಸುವ ನಿರೀಕ್ಷೆಯಿದ್ದು, 7 ಮಂದಿ ಆಟಗಾರರ ಪಂದ್ಯ ಇದಾಗಿದೆ. ಪಾಲ್ಗೊಳ್ಳುವ ತಂಡಗಳಿಗೆ ರೂ. 2 ಸಾವಿರ ಮೈದಾನ ಶುಲ್ಕ ನಿಗದಿಪಡಿಸಲಾಗಿದೆ. ನಾಕೌಟ್ ಮಾದರಿಯಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಜಯಗಳಿಸುವ ತಂಡಕ್ಕೆ ರೂ. 22222 ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. 11111 ನಗದು ಮತ್ತು ಟ್ರೋಫಿ ನೀಡಲಾಗುವದಲ್ಲದೆ, ಸರಣಿಯ ಅತ್ಯುತ್ತಮ ಆಟಗಾರ, ಅತ್ಯುತ್ತಮ ಗೋಲ್ ಕೀಪರ್, ಅತ್ಯಧಿಕ ಸ್ಕೋರರ್ ಮತ್ತು ಅತ್ಯುತ್ತಮ ತಂಡ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ. ಪಂದ್ಯಾವಳಿಗೆ ಜಿಲ್ಲೆಯ ಹಿರಿಯ ಕ್ರೀಡಾ ಸಾಧಕರನ್ನು ಅತಿಥಿಗಳನ್ನಾಗಿ ಆಹ್ವಾನಿಸಿ ಅವರ ಮೂಲಕ ಮಹಿಳಾ ಫುಟ್ಬಾಲ್ ಉತ್ತೇಜನಕ್ಕೆ ನೆರವು ಪಡೆಯುವ ಉದ್ದೇಶವಿದೆ ಎಂದು ಕವಿತಾ ಬೆಳ್ಯಪ್ಪ ಹೇಳಿದರು.
ಅಲ್ಲದೆ ಪಂದ್ಯಾವಳಿಯ ಸಮಾರೋಪದಂದು ಜಿಲ್ಲೆಯ ಎರಡು ಮಹಿಳಾ ಫುಟ್ಬಾಲ್ ತಂಡಗಳ ನಡುವೆ ಪ್ರದರ್ಶನ ಪಂದ್ಯವನ್ನು ಏರ್ಪಡಿಸುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ಬೇಸಿಗೆ ಅವಧಿಯಲ್ಲಿ ಅಂಡರ್ 14, ಅಂಡರ್ 18, ಅಂಡರ್ 22 ಹಾಗೂ ಮಹಿಳೆಯರಿಗೆ ಫುಟ್ಬಾಲ್ ತರಬೇತಿ ಶಿಬಿರ ಏರ್ಪಡಿಸುವ ಗುರಿ ಹೊಂದಿರುವದಾಗಿ ಅವರು ತಿಳಿಸಿದರು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ (8618303623), ಮಂದಪ್ಪ (9448976421) ಸಂಪರ್ಕಿಸಬಹುದಾಗಿದೆ.
ಗೋಷ್ಠಿಯಲ್ಲಿ ಕ್ಲಬ್ನ ಕಾರ್ಯದರ್ಶಿ ಬಿ. ಚೇತನಾ ವಿನಯ್, ಸದಸ್ಯೆ ಆರ್. ಗೀತಾ, ಜಗದೀಶ್ ಮಂದಪ್ಪ ಹಾಗೂ ದರ್ಶನ್ ಉಪಸ್ಥಿತರಿದ್ದರು.