ಮಡಿಕೇರಿ, ಏ. 8: ಮದುವೆ ಇತ್ಯಾದಿ ಸಮಾರಂಭಗಳನ್ನು ಏರ್ಪಡಿಸುವ ವೇಳೆ ಪರಂಪರಾಗತ ವಾಗಿ ಬಳಕೆಯಲ್ಲಿರುವ ಮದ್ಯ ಸೇವನೆಗೆ ಯಾವದೇ ನಿರ್ಬಂಧವಿಲ್ಲ ದಂತೆ ಮುಕ್ತ ಅವಕಾಶ ಕಲ್ಪಿಸಬೇಕೆಂಬ ಬೇಡಿಕೆಗೆ ಕೊಡಗು ಜಿಲ್ಲಾಡಳಿತ ಹಾಗೂ ಅಬ್ಕಾರಿ ಇಲಾಖೆ ಅಧಿಕಾರಿ ಗಳು ಪರಿಶೀಲನೆ ಮಾಡುತ್ತಿರುವದಾಗಿ ಮೂಲಗಳಿಂದ ಗೊತ್ತಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಹಾಗೂ ನೂತನ ಅಬ್ಕಾರಿ ಉಪ ಆಯುಕ್ತ ಎ.ಎಲ್. ನಾಗೇಶ್ ಗಮನ ಹರಿಸಿದ್ದಾರೆ.

ಚುನಾವಣೆಯ ಸಂದರ್ಭ ಜಿಲ್ಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಲ್ಯಾಣ ಮಂಟಪ ಹಾಗೂ ಇತರೆಡೆಗಳಲ್ಲಿ ಸಂಪ್ರದಾಯದಂತೆ ಮದ್ಯ ಬಳಕೆಗೆ ರಾಜ್ಯ ಚುನಾವಣಾ ಆಯುಕ್ತರು ನಿರ್ಬಂಧವಿಧಿಸಿರುವ ಬಗ್ಗೆ ‘ಶಕ್ತಿ’ ಬೆಳಕು ಚೆಲ್ಲಿತ್ತು. ಆ ಬೆನ್ನಲ್ಲೇ ವಿವಿಧ ಸಂಘ-ಸಂಸ್ಥೆಗಳು ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಅಬ್ಕಾರಿ ಇಲಾಖೆಗೆ ಆಕ್ಷೇಪಣೆ ಸಲ್ಲಿಸಿತ್ತು.ಕೊಡಗಿನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಶುಭ ಸಮಾರಂಭಗಳಲ್ಲಿನ ಮದ್ಯ ಬಳಕೆ ಅಥವಾ ಅತಿಥಿ ಸತ್ಕಾರ, ಇಲ್ಲಿನ ಸಂಪ್ರದಾಯವೇ ಹೊರತು ಕಲ್ಯಾಣ ಮಂಟಪಗಳಲ್ಲಿ ಮದ್ಯ ಮಾರಾಟ ಇತ್ಯಾದಿಗೆ ಅವಕಾಶವಿಲ್ಲವೆಂದು ವಿವಿಧ ಸಂಘಟನೆಗಳ ಪ್ರಮುಖರು ಸಂಬಂಧಪಟ್ಟವರ ಗಮನ ಸೆಳೆದಿದ್ದರು.

ಈ ಎಲ್ಲವನ್ನು ಗಣನೆಗೆ ತೆಗೆದುಕೊಂಡಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಅಬ್ಕಾರಿ ಇಲಾಖೆಯಿಂದ ಚುನಾವಣಾ ಸಂದರ್ಭ ಜಾರಿಗೊಳಿಸಿರುವ ಮದ್ಯ ಬಳಕೆ ನಿಷೇಧ ಅಥವಾ ರೂ. 11,500 ಮೊತ್ತ ನಗದು ಪಾವತಿಸಿ ತಾತ್ಕಾಲಿಕ ಅನುಮತಿ ಪತ್ರ ಪಡೆಯುವ ಕ್ರಮದ ಬಗ್ಗೆ ಮರು ಪರಿಶೀಲನೆಗೆ ನಿರ್ದೇಶಿಸಿದ್ದಾರೆ.

ಆ ಮೇರೆಗೆ ನೂತನ ಅಬ್ಕಾರಿ ಉಪ ಆಯುಕ್ತ ಎ.ಎಲ್. ನಾಗೇಶ್ ಅವರು, ಕರ್ನಾಟಕ ರಾಜ್ಯ ಅಬ್ಕಾರಿ ಮುಖ್ಯ ಆಯುಕ್ತರಿಗೆ ಪತ್ರ ಬರೆಯುವದರೊಂದಿಗೆ, ಜಿಲ್ಲೆಯಲ್ಲಿ ಸಂಪ್ರದಾಯದಂತೆ ಎಲ್ಲ ಶುಭ ಸಮಾರಂಭಗಳು ಹಾಗೂ ತಿಥಿ ಇತ್ಯಾದಿ ವೇಳೆ ಅತಿಥಿ ಸತ್ಕಾರಕ್ಕೆ ಮದ್ಯ ಬಳಕೆ ಮಾಮೂಲಿಯೆಂದು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಅಲ್ಲದೆ ವಿಶೇಷ ಸಂಪ್ರದಾಯ ಹೊಂದಿರುವ ಕೊಡಗಿನ ಜನತೆ ಆಚರಿಸಿಕೊಂಡು ಬರುತ್ತಿರುವ, ಮದ್ಯ ಬಳಕೆಯಂತಹ ಪದ್ಧತಿಗೆ ಚುನಾವಣೆ ವೇಳೆ ಸಹಿತ ಎಲ್ಲ ಸಂದರ್ಭಗಳಲ್ಲಿ ನಿರ್ಬಂಧವನ್ನು ತೆರವುಗೊಳಿಸುವಂತೆ ಆದೇಶ ನೀಡುವಂತೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯ ಆಯುಕ್ತ ರಿಂದ ಅಧಿಕೃತ ಅನುಮೋದನೆ ಲಭಿಸಿದರೆ ಇನ್ನು ಮುಂದೆ ರೂ. 11,500 ಮೊತ್ತ ಪಾವತಿಸಿ ತಾತ್ಕಾಲಿಕ ಅನುಮತಿ ಪತ್ರ ಅನ್ವಯಿಸದು ಎಂದು ಅವರು ಸುಳಿವು ನೀಡಿದ್ದಾರೆ.

ಕಾನೂನು ಹೊರತಲ್ಲ: ಚುನಾವಣಾ ವೇಳೆಯಲ್ಲಿ ಕಾನೂನು ಸುವ್ಯವಸ್ಥೆ

(ಮೊದಲ ಪುಟದಿಂದ) ದೃಷ್ಟಿಯಿಂದ ಕಲ್ಯಾಣ ಮಂಟಪ ಹಾಗೂ ಇತರೆಡೆ ಮದ್ಯ ಬಳಕೆಗೆ ಸಂಬಂಧಿಸಿ ತಾತ್ಕಾಲಿಕ ಅನುಮತಿಯೊಂದಿಗೆ ರೂ. 11,500 ಮೊತ್ತ ಶುಲ್ಕ ಪಾವತಿಸಬೇಕೆಂಬ ನಿಯಮ 1965ರ ಅಬ್ಕಾರಿ ಕಾಯ್ದೆ ಯಾಗಿದ್ದು, ಇದು ಹೊಸತಲ್ಲವೆಂದು ಮೂಲಗಳು ಸ್ಪಷ್ಟಪಡಿಸಿವೆ.

ಆದರೆ ಕೊಡಗಿನ ಜನತೆಯ ಸಾಂಪ್ರದಾಯಿಕ ಪದ್ಧತಿಗೆ ನಿರ್ಬಂಧ ಅಡ್ಡಿಯಾಗುತ್ತಿದೆ ಎಂಬ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಕರ್ನಾಟಕ ಅಬ್ಕಾರಿ ಕಾಯ್ದೆಯನ್ನು ಕೊಡಗು ಜಿಲ್ಲೆಯ ಮಟ್ಟಿಗೆ ವಿಶೇಷವಾಗಿ ಪರಿಗಣಿಸಿ ವಿನಾಯಿತಿ ನೀಡುವಂತೆ ಪ್ರಯತ್ನಿಸಲಾಗುತ್ತಿದೆ ಎಂದು ಉಪ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಈ ಕಾನೂನು ಚುನಾವಣೆಯ ಸಂದರ್ಭ ಹೊರತಾಗಿಯೂ ಜಾರಿಯಲ್ಲಿದ್ದು, ಜಿಲ್ಲೆಯ ಜನತೆಯ ಭಾವನೆಗಳಿಗೆ ಧಕ್ಕೆಯಾಗದಂತೆ ಇಲಾಖೆಯಿಂದ ತಟಸ್ಥ ನಿಲುವು ಅನುಸರಿಸುತ್ತಿದ್ದು, ಕಾನೂನಿನ ಅರಿವು ಇರುವವರು ಸ್ವಯಂ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸುವ ಮೂಲಕ ಇಲಾಖೆ ಯಿಂದ ತಾತ್ಕಾಲಿಕ ಪರವಾನಗಿ ಹೊಂದಿಕೊಳ್ಳುತ್ತಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ಗೊಂದಲ ಎದುರಾಗ ದಂತೆ ರಾಜ್ಯ ಅಬ್ಕಾರಿ ಆಯುಕ್ತರಿಂದ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ನಾಗೇಶ್ ಸುಳಿವು ನೀಡಿದ್ದಾರೆ.