ವೀರಾಜಪೇಟೆ, ಏ. 7: ಚುನಾವಣೆ ನೀತಿ ಸಂಹಿತೆಯನ್ನು ಕಾಪಾಡುವ ಸಲುವಾಗಿ ಜಿಲ್ಲೆಯ ಮುಖ್ಯ ಚುನಾವಣಾಧಿಕಾರಿ ಕುಟುಂಬಗಳ ನಡುವಿನ ಮದುವೆ, ಇತರ ಶುಭ ಸಮಾರಂಭಗಳಲ್ಲಿ ಮದ್ಯ ನಿಷೇಧ ಮಾಡಿರುವದನ್ನು ಕೊಡವ ಸಮಾಜ ವಿರೋಧಿüಸುವದಾಗಿ ಅಧ್ಯಕ್ಷ ವಾಂಚೀರ ನಾಣಯ್ಯ ಹೇಳಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾಣಯ್ಯ, ಶತಮಾನಗಳಿಂದಲೂ ಮದುವೆ, ನಾಮಕರಣ, ನಿಶ್ಚಿತಾರ್ಥ, ತಿಥಿ ಕರ್ಮಾಂತರಕ್ಕೆ ಸಮಾರಂಭಕ್ಕೆ ಮೊದಲು ಪದ್ಧತಿ ಪ್ರಕಾರ ಗುರುಕಾರೋಣರಿಗೆÀ ಮೀದಿ ನೈವೇದ್ಯಕ್ಕೆÀ ಪೂಜಾ ಸೇವೆಯ ನಂತರ ಸಮಾರಂಭದ ಆಹ್ವಾನಿತರಿಗೆ ಮದ್ಯ ವಿತರಣೆ ಮಾಡುವದು ಸಾಮಾನ್ಯವಾಗಿದೆ. ಈ ಮೀದಿ ನೈವೇದ್ಯಕ್ಕೆ ಮದ್ಯ ಅವಶ್ಯಕವಾಗಿದೆ. ಜಿಲ್ಲಾಧಿಕಾರಿಯವರು ನೀತಿ ಸಂಹಿತೆಯನ್ನು ಮುಂದೊಡ್ಡಿ ಸಾಂಪ್ರದಾಯಿಕ ಶುಭ ಸಮಾರಂಭಗಳಿಗೆ ಮದ್ಯ ವಿತರಣೆ ನಿಷೇಧಿಸಿರುವದನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿದರು.

ಕೊಡವ ಸಮಾಜದ ಗೌರವ ಕಾರ್ಯದರ್ಶಿ ಕುಲ್ಲಚಂಡ ಎಂ. ಪೂಣಚ್ಚ ಮಾತನಾಡಿ ಕೊಡವ ಸಮಾಜದಲ್ಲಿ ನಡೆಯುವ ಶುಭ ಸಮಾರಂಭಗಳಲ್ಲಿ ಮದ್ಯ ವಿತರಣೆಯಿಂದ ಹಿಂದಿನ ಅನೇಕ ದಶಕಗಳಿಂದಲೂ ಯಾವದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿಲ್ಲ, ಮುಂದೆಯೂ ಸಂಭವಿಸುವದಿಲ್ಲ. ಮದ್ಯ ನಿಷೇಧದಿಂದ ಶುಭ ಸಮಾರಂಭಗಳನ್ನು ಆಯೋಜಿಸುವವರಿಗೆ ತೊಂದರೆಯಾಗಿದೆ. ಜಿಲ್ಲಾಧಿಕಾರಿಗಳು ಈ ಆದೇಶವನ್ನು ಪುನರ್ ಪರಿಶೀಲಿಸಬೇಕು. ಇಲ್ಲದಿದ್ದರೆ ಕೊಡಗಿನ ಇತರ ಎಲ್ಲ ಕೊಡವ ಸಮಾಜಗಳ ಜನರ ಸಹಕಾರದೊಂದಿಗೆ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಹೇಳಿದರು.

ಮರಣ ನಿಧಿಯ ಕಾರ್ಯದರ್ಶಿ ಅಲ್ಲಪಂಡ ಎಂ. ಚಿಣ್ಣಪ್ಪ ಮಾತನಾಡಿ ನೀತಿ ಸಂಹಿತೆಯ ಕಾರಣದಿಂದ ಮದ್ಯ ನಿಷೇಧಿಸಿರುವದರ ಕುರಿತು ಬಾಳುಗೋಡಿನ ಕೊಡವ ಸಮಾಜಗಳ ಒಕ್ಕೂಟ ಹಾಗೂ ಅಖಿಲ ಕೊಡವ ಸಮಾಜ ವಿಚಾರ ವಿನಿಮಯ ಮಾಡಿ ಒಂದು ನಿಲುವನ್ನು ಕೈಗೊಳ್ಳಬೇಕು.

ಮದ್ಯ ನಿಷೇಧ ರದ್ದು ಪಡಿಸುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯನ್ನು ಒತ್ತಾಯಿಸುವಂತೆ ಹೇಳಿದರು.