ಮಡಿಕೇರಿ ಏ.7 : ದಿಡ್ಡಳ್ಳಿಯ ಆದಿವಾಸಿಗಳ ಪರವಾಗಿ ನಡೆಸಿದ ಹೋರಾಟದಲ್ಲಿ ಪಾಲ್ಗೊಂಡ ಹಿರಿಯ ವಕೀಲ ಎ.ಕೆ.ಸುಬ್ಬಯ್ಯ, ನಟ ಚೇತನ್ ಹಾಗೂ ಯುವ ಮುಖಂಡ ಜಿಘ್ನೇಶ್ ಮೇವಾನಿ ಅವರುಗಳಿಗೆ ನಕ್ಸಲ್ ನಂಟಿದೆಯೆಂದು ಬಿಜೆಪಿ ಚಾರ್ಜ್ ಶೀಟ್‍ನಲ್ಲಿ ಪ್ರಸ್ತಾಪಿಸಿರುವ ಕ್ರಮ ಖಂಡನೀಯವೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಡಿ.ಎಸ್.ನಿರ್ವಾಣಪ್ಪ, ಆರಂಭದಲ್ಲಿ ಆದಿವಾಸಿ ಮುಖಂಡರಾದ ಮುತ್ತಮ್ಮ ಹಾಗೂ ಅಪ್ಪಾಜಿ ಅವರು ನಡೆಸುತ್ತಿದ್ದ ಹೋರಾಟದ ನಾಯಕತ್ವವನ್ನು ಎ.ಕೆ. ಸುಬ್ಬಯ್ಯ ಹಾಗೂ ನಟ ಚೇತನ್ ವಹಿಸಿಕೊಂಡ ನಂತರ ಸುಮಾರು 528 ಮಂದಿ ನಿರಾಶ್ರಿತರಿಗೆ ನಿವೇಶನ ಸಿಕ್ಕಿದೆಯೆಂದು ಸಮರ್ಥಿಸಿಕೊಂಡರು. ಜೀತಪದ್ಧತಿ ಮತ್ತು ಲೈನ್ ಮನೆಯಲ್ಲಿ ಇರುವ ನಿವಾಸಿಗಳಿಗೆ ವೀರಾಜಪೇಟೆ ಹಾಗೂ ಸೋಮವಾರಪೇಟೆ ವಿಭಾಗದಲ್ಲಿ ಆಶ್ರಯ ಕಲ್ಪಿಸುವ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ ಎಂದರು.

ಆರಂಭದಲ್ಲಿ ದಿಡ್ಡಳ್ಳಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಮುತ್ತಮ್ಮ ಹಾಗೂ ಅಪ್ಪಾಜಿ ಅವರನ್ನು ಇತ್ತೀಚೆಗೆ ಬಿಜೆಪಿ ಹಾರ ಹಾಕಿ ತನ್ನೆಡೆಗೆ ಸೆಳೆÉದುಕೊಂಡಿದೆ. ಬಿಜೆಪಿಗೆ ಸೇರಿದವರನ್ನು ಬಿಟ್ಟು ಉಳಿದವರನ್ನು ನಕ್ಸಲರು ಎಂದು ಆರೋಪ ಮಾಡಿರುವದು ಎಷ್ಟು ಸರಿ ಎಂದು ನಿರ್ವಾಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಆದಿವಾಸಿಗಳು ಬೀದಿಗೆ ಬಿದ್ದಿದ್ದಾಗ ತಿರುಗಿಯೂ ನೋಡದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಇದೀಗ ಬ್ಯಾಡಗೊಟ್ಟ, ಬಸವನಹಳ್ಳಿಗೆ ಭೇಟಿ ನೀಡಿ, ಪುನರ್ ವಸತಿ ಹೊಂದಿರುವ ಆದಿವಾಸಿಗಳನ್ನು ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆಂದು ಆರೋಪಿಸಿದರು.

ಸಮಿತಿಯ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ದಿಡ್ಡಳ್ಳಿಯಲ್ಲಿ ನಡೆದ ಹೋರಾಟ, ರಾಜಕೀಯ ಪ್ರೇರಿತವಲ್ಲ. ಬದಲಿಗೆ, ಸಂಕಷ್ಟದಲ್ಲಿದ್ದ ಆದಿವಾಸಿಗಳಿಗೆ ನ್ಯಾಯ ಒದಗಿಸುವ ಗುರಿ ಹೊಂದಲಾಗಿತ್ತೆಂದು ಸ್ಪಷ್ಟಪಡಿಸಿದರು. ಬಿಜೆಪಿ ಈ ಹೋರಾಟವನ್ನು ಚಾರ್ಜ್ ಶೀಟ್‍ನಲ್ಲಿ ಪ್ರಸ್ತಾಪಿಸಿರುವದನ್ನು ಗಮನಿಸಿದರೆ, ನಮ್ಮ ಹೋರಾಟದಿಂದ ಬಿಜೆಪಿಗೆ ನಷ್ಟವಾಗಿದೆ ಎನ್ನುವದು ತಿಳಿದು ಬರುತ್ತದೆ. ಬಿಜೆಪಿಗೆ ನಷ್ಟವಾಗುವ ಹೋರಾಟಗಳನ್ನು ಇನ್ನು ಮುಂದೆಯೂ ನಡೆಸಲಿದ್ದೇವೆ ಎಂದು ಅಮಿನ್ ಮೊಹಿಸಿನ್ ತಿಳಿಸಿದರು.

ಬಿಜೆಪಿಯನ್ನು ನಾವು ಹಿಂದಿನಿಂದಲೂ ವಿರೋಧಿಸುತ್ತಲೆ ಬಂದಿದ್ದೇವೆ. ಕಾಂಗ್ರೆಸ್ ರಾಜಕೀಯವಾಗಿ ನಮ್ಮ ಶತ್ರುವಲ್ಲ. ಆದರೂ, ದುರ್ಬಲರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರೆಯದೆ ಇದ್ದಲ್ಲಿ ನಾವು ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸಬೇಕಾಗುತ್ತದೆ ಎಂದರು. ಯಾವದೇ ಪಕ್ಷಗಳಿಗೆ ಬಹಿರಂಗವಾಗಿ ಬೆಂಬಲ ಸೂಚಿಸುವದಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಕೋಮುವಾದಿಗಳನ್ನು ದೂರ ಇಡುತ್ತೇವೆ ಎಂದರು.

ದಿಡ್ಡÀಳ್ಳಿ ಹೋರಾಟಗಾರ್ತಿ ಅನಿತಾ ಮಾತನಾಡಿ, 528 ಮಂದಿಗೆ ಮಾತ್ರ ನಿವೇಶನ ದೊರೆತಿದ್ದು, ಇನ್ನಷ್ಟು ಮಂದಿ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದರು.

ಪುನರ್ವಸತಿ ಒದಗಿಸಿರುವ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯಲ್ಲಿ ಮನೆಗಳ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದ್ದು, ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಕೇವಲ ಒಂದು ಅಡಿಯಷ್ಟು ಆಳದ ಅಡಿಪಾಯವನ್ನು ತೆಗೆಯಲಾಗಿದ್ದು, ಸಣ್ಣ ಸಣ್ಣ ಮನೆಗಳನ್ನಷ್ಟೆ ನಿರ್ಮಿಸಲಾಗುತ್ತಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.

ದಿಡ್ಡಳ್ಳಿಯ ರಾಜು ಮಾತನಾಡಿ, ಪುನರ್ವಸತಿ ಕೇಂದ್ರ್ರದಲ್ಲಿರುವ ಆದಿವಾಸಿಗಳ ಸ್ಥಿತಿ ಗಂಭೀರವಾಗಿದ್ದು, ಉದ್ಯೋಗ ಸಿಗದೆ ಸಂಕಷ್ಟ ಎದುರಿಸುವಂತಾಗಿದೆ. ಆಹಾರ ಸಾಮಗ್ರಿ ದೊರೆಯುತ್ತಿಲ್ಲ, ಕೆಲಸಕ್ಕಾಗಿ ಊರೂರು ಅಲೆಯಬೇಕಾದ ದುಸ್ಥಿತಿ ಇದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖ ಪಾಲೇಮಾಡಿನ ಮೊಣ್ಣಪ್ಪ ಉಪಸ್ಥಿತರಿದ್ದರು.