ಮಡಿಕೇರಿ, ಏ. 7: ಮಡಿಕೇರಿ ತಾಲೂಕಿನ ಚೆಯ್ಯಂಡಾಣೆ ಬಳಿಯ ನರಿಯಂದಡ ಕೇಂದ್ರ ವಿದ್ಯಾ ಸಂಸ್ಥೆಯ ನಿರ್ವಹಣೆಯನ್ನು ಮಠವೊಂದಕ್ಕೆ ಹಸ್ತಾಂತರಗೊಳಿಸುವ ಸಂಬಂಧ ಅಸಮಾಧಾನ ಸ್ಫೋಟಗೊಂಡು ಪ್ರತಿಭಟನೆಗೆ ಕಾರಣವಾಯಿತು. ಕಳೆದ ಏ.3ರಂದು ಈ ಶಿಕ್ಷಣ ಸಂಸ್ಥೆಯ ವಿಶೇಷ ಮಹಾಸಭೆ ನಡೆಸಿ ಮಠ ವೊಂದಕ್ಕೆ ನೀಡುವ ಬಗ್ಗೆ ನಿರ್ಣಯ ಕೈಗೊಂಡಿದ್ದಾಗಿ ತಿಳಿದುಬಂದಿದೆ.ಆ ಬಳಿಕ ಕೆಲವರು ಈ ಶಿಕ್ಷಣ ಸಂಸ್ಥೆಯನ್ನು ಹಸ್ತಾಂತರಿಸಲು ಆಕ್ಷೇಪವೆತ್ತಿದ್ದು, ವಿಷಯ ತಿಳಿದ ಕೆಲವರು ಪೋಷಕರು ಇಂದು ಶಾಲೆಗೆ ತೆರಳಿ ಆಡಳಿತ ಮಂಡಳಿ ಹಾಲೀ ಅಧ್ಯಕ್ಷ ಮತ್ತು ಕಾರ್ಯದರ್ಶಿ ವಿರುದ್ಧ ಪ್ರತಿಭಟಿಸಿದರು.

ಈ ವೇಳೆ ಹಾಲೀ ಕಾರ್ಯದರ್ಶಿ ವಿರುದ್ಧ ಹಣ ದುರುಪಯೋಗದ ಆರೋಪ ಕೂಡ ಕೇಳಿಬಂದಿದೆ. ಈ ಎಲ್ಲ ಬೆಳವಣಿಗೆ ನಡುವೆ ತಾ. 9ರಂದು ವಿದ್ಯಾಸಂಸ್ಥೆಯ ತುರ್ತು ಸಭೆ ಕರೆಯಲಾಗಿದೆ, ಕಳೆದ ಮಹಾಸಭೆ ನಿರ್ಣಯದಂತೆ ಶಾಲೆಯನ್ನು ಮಠಕ್ಕೆ ಹಸ್ತಾಂತರಿಸದಿದ್ದರೆ ಮುಂದಿನ ಶೈಕ್ಷಣಿಕ ಅವಧಿಗೆ ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸುವದಿಲ್ಲವೆಂದು ಇಂದು ಪ್ರತಿಭಟನಾನಿರತ ಪೋಷಕರು ಸುಳಿವು ನೀಡಿದ್ದಾರೆ.