ಮಡಿಕೇರಿ, ಏ. 4: ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು, ನಗರದಲ್ಲಿ ಮದ್ಯದಂಗಡಿಗಳ ತಪಾಸಣೆಗೆ ತೆರಳಿದ್ದ ವೇಳೆ ಸಮರ್ಪಕ ದಾಖಲಾತಿಗಳನ್ನು ಹಾಜರುಪಡಿಸದ ಕಾರಣಕ್ಕಾಗಿ ಇಲ್ಲಿನ ಮದ್ಯದಂಗಡಿ ಯೊಂದಕ್ಕೆ ಮುಂದಿನ ಎರಡು ತಿಂಗಳು ಬೀಗ ಜಡಿಯಲಾಗಿದೆ.ನಗರದ ಓಂಕಾರೇಶ್ವರ ದೇವಾಲಯಕ್ಕೆ ತೆರಳುವ ಮಾರ್ಗದ ಚಿಕ್ಕಪೇಟೆ ಬಳಿಯ ಈ ಮದ್ಯದಂಗಡಿಗೆ ಜಿಲ್ಲಾಧಿಕಾರಿ ಹಠಾತ್ ಭೇಟಿ ನೀಡಿದ್ದಾರೆ. ಈ ಸಂದರ್ಭ ಕುಡುಕನೊಬ್ಬ ಅಂಗಡಿಯ ಬಾಗಿಲು ಬಳಿಯೇ ಕುಡಿಯುತ್ತಾ ನಿಂತಿರುವದು ಗೋಚರಿಸಿದೆ. ಅಲ್ಲದೆ ಅಂಗಡಿಯಾತನಲ್ಲಿ ಪರಿಶೀಲಿಸಿದಾಗ ಸಕಾಲದಲ್ಲಿ ಸೂಕ್ತ ದಾಖಲೆಗಳನ್ನು ಪ್ರದರ್ಶಿಸಲಿಲ್ಲವೆಂದು ತಿಳಿದು ಬಂದಿದೆ.

ಅಲ್ಲದೆ ಸಂಬಂಧಿಸಿದ ಮದ್ಯದಂಗಡಿಯ ಸನ್ನದ್ದು ಸಂಖ್ಯೆ ಹಾಗೂ ವ್ಯಾಪಾರಿಯ ವಿವರ ಇತ್ಯಾದಿಯ ನಾಮಫಲಕ ಕೂಡ ಅಳವಡಿಸದಿರುವದು ಜಿಲ್ಲಾಧಿಕಾರಿಗಳ ಮತ್ತಷ್ಟು ಕೋಪಕ್ಕೆ ಕಾರಣವಾಗಿದೆ.

(ಮೊದಲ ಪುಟದಿಂದ) ಈ ಸಂಬಂಧ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಶ್ರೀವಿದ್ಯಾ ನಿರ್ದೇಶಿಸಿದ್ದಾರೆ.

ಆ ಮೇರೆಗೆ ಇದೀಗ ಅಬ್ಕಾರಿ ಇಲಾಖೆಯಿಂದ ಕ್ರಮ ಜರುಗಿಸುವದರೊಂದಿಗೆ ಮದ್ಯದಂಗಡಿಯ ವ್ಯಾಪಾರ ಸ್ಥಗಿತಗೊಳಿಸಿ ಸ್ವತ್ತು ಅಮಾನತುಗೊಳಿಸುವ ಮೂಲಕ ಬೀಗ ಜಡಿದು ಕಾನೂನು ಕ್ರಮ ಜರುಗಿಸಲಾಗಿದೆ. ಆ ಬೆನ್ನಲ್ಲೇ ಇದೀಗ ಮದ್ಯದಂಗಡಿಗೆ ಹೊಸ ಫಲಕ ಕೂಡ ಅಳವಡಿಸಿರುವದು ಗೋಚರಿಸಿದೆ.