ಮಡಿಕೇರಿ, ಏ. 4: ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾನದ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ, ಬದಲಾವಣೆ ಸೇರಿದಂತೆ ಮಡಿಕೇರಿ ಹೋಬಳಿ ವ್ಯಾಪ್ತಿಯಲ್ಲಿ ಇದುವರೆಗೆ 357 ಅರ್ಜಿಗಳು ಮಡಿಕೇರಿ ತಹಶೀಲ್ದಾರ್ ಕಚೇರಿಗೆ ಸಲ್ಲಿಕೆಯಾಗಿವೆ.
ಮಡಿಕೇರಿ ಹೋಬಳಿ ವ್ಯಾಪ್ತಿಯಲ್ಲಿ ಪ್ರಸ್ತುತ 52,027 ಮತದಾರರಿದ್ದಾರೆ. ಈ ಪೈಕಿ ಮಹಿಳಾ ಮತದಾರರು 26139, ಪುರುಷ ಮತದಾರರು 25,887 ಮಂದಿ ಇದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ 217 ಅರ್ಜಿಗಳು ಸಲ್ಲಿಕೆಯಾಗಿವೆ, ಮತದಾನದ ಗುರುತಿನ ಚೀಟಿಯನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಬದಲಾಯಿಸಿಕೊಳ್ಳುವ ನಿಟ್ಟಿನಲ್ಲಿ 6 ಅರ್ಜಿಗಳು ಬಂದಿವೆ. ಇನ್ನು ಗುರುತಿನ ಚೀಟಿಯಲ್ಲಿನ ತಿದ್ದುಪಡಿಗೆ ಸಂಬಂಧಿಸಿದಂತೆ 130 ಅರ್ಜಿಗಳು ಸಲ್ಲಿಕೆಯಾಗಿವೆ. ಮೃತಪಟ್ಟಿರುವವರ ಹೆಸರನ್ನು ಪಟ್ಟಿಯಿಂದ ತೆಗೆಯಲು 4 ಅರ್ಜಿಗಳು ಸೇರಿ ಒಟ್ಟು 357 ಅರ್ಜಿಗಳು ಮಾರ್ಚ್ ಆರಂಭದಿಂದ ಇಲ್ಲಿಯವರೆಗೆ ಸಲ್ಲಿಸಲ್ಪಟ್ಟಿವೆ ಎಂದು ಮಡಿಕೇರಿ ತಹಶೀಲ್ದಾರ್ ಶಾರದಾಂಬ ಮಾಹಿತಿ ನೀಡಿದ್ದಾರೆ.
ಸೋಮವಾರಪೇಟೆ ವ್ಯಾಪ್ತಿಯಲ್ಲಿ ಪ್ರಸ್ತುತ 1,58,981 ಮತದಾರರಿದ್ದಾರೆ. ಈ ಪೈಕಿ 78,786 ಪುರುಷ ಮತದಾರರು, 80,195 ಮಹಿಳಾ ಮತದಾರರಿದ್ದಾರೆ. ಮತದಾರರ ಪಟ್ಟಿ ನೂತನ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ 813 ಅರ್ಜಿಗಳು ಬಂದಿವೆ. ಹೆಸರನ್ನು ತೆಗೆಸುವ ನಿಟ್ಟಿನಲ್ಲಿ 40, ವರ್ಗಾವಣೆಗೆ 34 ಅರ್ಜಿಗಳು ಸಲ್ಲಿಸಲ್ಪಟ್ಟಿದೆ ಎಂದು ಚುನಾವಣೆ ಶಾಖೆಯ ಅಧಿಕಾರಿ ಲೋಹಿತ್ ತಿಳಿಸಿದ್ದಾರೆ.