ಮಡಿಕೇರಿ, ಏ. 4: ಹರಯಕ್ಕೆ ಬಂದ ಹುಡುಗ - ಹುಡುಗಿಯರು ಬಾಣೆಯಲ್ಲಿ ಇದ್ದುದನ್ನು ಗಮನಿಸಿದ ಸ್ಥಳೀಯರು ಎರಡು ಜೋಡಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿರುವ ಘಟನೆ ಬೆಳಕಿಗೆ ಬಂದಿದೆ.ಭಾಗಮಂಡಲ ಕಾಲೇಜಿನ ಇಬ್ಬರು ಪಿಯುಸಿ ಹುಡುಗಿಯರು ಹಾಗೂ ಎಮ್ಮೆಮಾಡುವಿನ ಇಬ್ಬರು ಯುವಕರು ಭಾಗಮಂಡಲ ಸನಿಹದ ಅಂಬ್ರಾಟಿ ಬಾಣೆಯಲ್ಲಿದ್ದವರನ್ನು ಸ್ಥಳೀಯ ಯುವಕರು ಗಮನಿಸಿ, ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಮೊನ್ನೆ ದಿನ ಅಪರಿಚಿತ ಯುವಕರ ಬೈಕ್ ಸುಳಿದಾಡಿದ್ದನ್ನು ಗಮನಿಸಿದ ಸ್ಥಳೀಯರು ಜಾಡು ಹಿಡಿದು ಹೊರಟಾಗ ಬಾಣೆಯ ಬದಿಯಲ್ಲಿ ಎರಡು ಜೋಡಿಗಳು ಅರೆಬೆತ್ತಲೆಯಾಗಿ ಇದ್ದುದು ಕಂಡು ಬಂದಿದೆ. ವಿಚಾರಿಸಲಾಗಿ, ಯುವಕರಿಬ್ಬರು ಹಾಗೂ ಯುವತಿಯೋರ್ವಳು ಅನ್ಯಕೋಮಿನವರಾಗಿದ್ದು, ಮತ್ತೋರ್ವ ಯುವತಿ ಚೆಟ್ಟಿಮಾನಿ ಗ್ರಾಮದವಳಾಗಿರುವದು ತಿಳಿದು ಬಂದಿದೆ. ಮೊಬೈಲ್ ಮೂಲಕ ಸಲುಗೆ ಬೆಳೆದು ಯುವಕರ ಕೋರಿಕೆಯಂತೆ ಬಾಣೆಗೆ ಬಂದಿರುವದಾಗಿ ತಿಳಿದು ಬಂದಿದೆ.
ನಂತರ ನಾಲ್ವರನ್ನು ಭಾಗಮಂಡಲ ಠಾಣೆಗೆ ಒಪ್ಪಿಸಲಾಗಿದ್ದು, ಪೊಲೀಸರು ನಾಲ್ವರ ಪೋಷಕರನ್ನು ಕರೆಯಿಸಿ ಮಾತುಕತೆ ಮಾಡಿ ಬಿಟ್ಟು ಕಳುಹಿಸಿದ್ದಾರೆ. ಅನ್ಯಕೋಮಿಗೆ ಸೇರಿದ ಯುವಕ - ಯುವತಿಯನ್ನು ಯುವತಿ ಮದುವೆ ವಯಸ್ಸಿಗೆ ಬಂದಾಗ ಮದುವೆ ಮಾಡಿಸುವ ಬಗ್ಗೆ ತೀರ್ಮಾನ ಮಾಡಿ ಕಳುಹಿಸಲಾಗಿದೆ. ಈ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.