ಮಡಿಕೇರಿ, ಏ. 4: ಜಾಗತಿಕ ಮಟ್ಟದಲ್ಲಿ ನಡೆಯುವ ಪ್ರತಿಷ್ಠಿತವಾದ ಕ್ರೀಡಾಕೂಟವಾದ ಒಲಂಪಿಕ್ಸ್ನ ಬಳಿಕ ಜಗತ್ತಿನ ಮತ್ತೊಂದು ಅತಿದೊಡ್ಡ ಕ್ರೀಡಾ ಉತ್ಸವ ಕಾಮನ್ವೆಲ್ತ್ ಕ್ರೀಡೆಯಾಗಿದ್ದು, 2018ರ ಕ್ರೀಡಾಕೂಟಕ್ಕೆ ಚಾಲನೆ ದೊರೆತಿದೆ. ಒಲಂಪಿಕ್ಸ್ನಷ್ಟೇ ಈ ಕ್ರೀಡಾಕೂಟವೂ ಪ್ರತಿಷ್ಠಿತವಾದದ್ದು. ಇಂತಹ ಮೇರುಮಟ್ಟದ ಕ್ರೀಡೆಗಳಲ್ಲಿ ಭಾರತದಲ್ಲಿ ಕ್ರೀಡಾಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕದ ಅತ್ಯಂತ ಪುಟ್ಟದಾದ ಕೊಡಗು ಜಿಲ್ಲೆಯ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವದು ಇಲ್ಲಿನ ಖ್ಯಾತಿಗೆ ಮತ್ತಷ್ಟು ಕಳೆ ಒದಗಿಸುವದಲ್ಲದೆ ಸಹಜವಾಗಿಯೇ ಕ್ರೀಡಾಭಿಮಾನಿಗಳ ಚಿತ್ತವನ್ನು ಈ ಕ್ರೀಡಾಕೂಟದತ್ತ ಕೊಂಡೊಯ್ಯುತ್ತದೆ. ಕಾಮನ್ವೆಲ್ತ್ ಕ್ರೀಡಾಕೂಟ ಮೊದಲ ಬಾರಿಗೆ 1930ರಲ್ಲಿ ಮೊದಲ ಬಾರಿಗೆ ಕೆನಡಾದಲ್ಲಿ ಜರುಗಿದ್ದು, ಇದರಲ್ಲಿ ಭಾರತ ಪಾಲ್ಗೊಂಡಿರಲಿಲ್ಲ. ಬಳಿಕ 16 ಕ್ರೀಡಾಕೂಟಗಳಲ್ಲಿ ಭಾರತ ಪಾಲ್ಗೊಂಡಿದ್ದು, 2010ರಲ್ಲಿ ನವದೆಹಲಿಯಲ್ಲಿ ಈ ಕ್ರೀಡೆಗೆ ಆತಿಥ್ಯವನ್ನೂ ವಹಿಸಿತ್ತು.
ಪ್ರತಿನಾಲ್ಕು ವರ್ಷಗಳಿಗೊಮ್ಮೆ ಈ ಕ್ರೀಡಾಕೂಟ ನಡೆಯಲಿದ್ದು, 2014ರಲ್ಲಿ ಗ್ಲಾಸ್ಕೋದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪದಕ ಪಟ್ಟಿಯಲ್ಲಿ ಭಾರತ 5ನೇ ಸ್ಥಾನಗಳಿಸಿದ್ದು, ಟಾಪ್ 5 ರಾಷ್ಟ್ರಗಳ ಪಟ್ಟಿಯಲ್ಲಿತ್ತು. ಕಾಮನ್ವೆಲ್ತ್ ಕ್ರೀಡೆಯಲ್ಲಿ ಭಾರತ ಈತನಕ 155 ಚಿನ್ನ, 155 ಬೆಳ್ಳಿ, 128 ಕಂಚಿನ ಪದಕ ಸೇರಿದಂತೆ ಒಟ್ಟು 438 ಪದಕ ಗಳಿಸಿರುವ ಇತಿಹಾಸ ಹೊಂದಿದೆ. ಭಾರತ ಗಳಿಸಿರುವ ಪದಕಗಳ ಪಟ್ಟಿಗೆ ಕೊಡಗು ಜಿಲ್ಲೆಯ ಹಲವರೂ ಕೊಡುಗೆ ನೀಡಿರುವದು ಜಿಲ್ಲೆಗೆ ಹೆಮ್ಮೆ.
ಈ ಬಾರಿ ಭಾರತ
2018ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಆಸ್ಟ್ರೇಲಿಯಾ ಆತಿಥ್ಯ ವಹಿಸಿದೆ. ಆಸ್ಟ್ರೇಲಿಯಾದ ಗೋಲ್ಡ್ಕೋಸ್ಟ್ನಲ್ಲಿ ತಾ. 4ರಂದು ಕೂಟದ 21ನೇ ಆವೃತ್ತಿಗೆ ಚಾಲನೆ ದೊರೆತಿದೆ. ರಂಗು - ರಂಗಿನ ಸಮಾರಂಭದ ಮೂಲಕ ಕ್ರೀಡಾಕೂಟ ಆರಂಭಗೊಂಡಿದ್ದು, ಭಾರತದ ಧ್ವಜವನ್ನು ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಎತ್ತಿ ಹಿಡಿದು ದೇಶದ ಕ್ರೀಡಾಪಟುಗಳನ್ನು ಮುನ್ನಡೆಸುವ ಅವಕಾಶ ಪಡೆದಿದ್ದರು. ಒಟ್ಟು 11 ದಿನಗಳ ಈ ಕ್ರೀಡಾಕೂಟದಲ್ಲಿ 71 ರಾಷ್ಟ್ರಗಳ 6,600 ಕ್ರೀಡಾಪಟುಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಬಾರಿಯ ಅಖಾಡದಲ್ಲಿ ಭಾರತದ 221 ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾಗವಹಿಸಲಿರುವ 6,600 ಕ್ರೀಡಾಪಟುಗಳು, ಅಧಿಕಾರಿಗಳ ವಸತಿ ಸೇರಿದಂತೆ ಕ್ರೀಡೆಗೆ ಸುಸಜ್ಜಿತವಾದ ಕ್ರೀಡಾಗ್ರಾಮ 71.66 ಎಕರೆ ಜಾಗದಲ್ಲಿ ರೂ.2,745 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ.
ಕೊಡಗಿನ ತಾರೆಯರು...
ಕರ್ನಾಟಕ ರಾಜ್ಯ ಹಾಗೂ ಕರ್ನಾಟಕ ಮೂಲದವರಾಗಿ ಒಟ್ಟು 13 ಮಂದಿ ಈ ಬಾರಿಯ ಕ್ರೀಡೆಯಲ್ಲಿ ಪಾಲ್ಗೊಂಡಿದ್ದಾರೆ. ಈ 13 ಸ್ಪರ್ಧಿಗಳ ಪೈಕಿ ಆರು ಕ್ರೀಡಾ ತಾರೆಯರು ಮೂಲತಃ ಕೊಡಗು ಜಿಲ್ಲೆಯವರು ಎಂಬದು ಕೊಡಗಿನ ಕ್ರೀಡಾ ಪ್ರೇಮಿಗಳಿಗೆ ಅತ್ಯಂತ ಸಂತೋಷ ದಾಯಕವಾದ ವಿಚಾರವಾಗಿದೆ. ಕೊಡಗಿನ ಆರು ಮಂದಿಯ ಪೈಕಿ ಇಬ್ಬರು ಹೊಸ ಮುಖ. ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಸ್ಕ್ವಾಷ್, ಬಾಸ್ಕೆಟ್ಬಾಲ್ ಹಾಗೂ ಹಾಕಿಯಲ್ಲಿ ಕೊಡಗಿನ ಕ್ರೀಡಾಳುಗಳು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
(ಮೊದಲ ಪುಟದಿಂದ) ಈ ಹಿಂದಿನಿಂದಲೂ ದೇಶವನ್ನು ಪ್ರತಿನಿಧಿಸುತ್ತಿರುವ ಕ್ರೀಡಾ ತಾರೆಯರಾದ ಮಾಚೆಟ್ಟಿರ ಆರ್. ಪೂವಮ್ಮ (400 ಮೀ., 400x400 ಮೀ. ರಿಲೇ) ಬ್ಯಾಡ್ಮಿಂಟನ್ನಲ್ಲಿ ಪೊನ್ನಚೆಟ್ಟಿರ ಅಶ್ವಿನಿ ಪೊನ್ನಪ್ಪ (ತವರುಮನೆ ಮಾಚಿಮಂಡ) ಸ್ಕ್ವಾಷ್ನಲ್ಲಿ ಕುಟ್ಟಂಡ ಜೋತ್ಸ್ನಾ ಚಿಣ್ಣಪ್ಪ ಸ್ಪರ್ಧಾಕಣದಲ್ಲಿದ್ದಾರೆ. ಪುರುಷರ ಹಾಕಿಯಲ್ಲಿ ಈ ಬಾರಿ ಭಾರತ ತಂಡದಲ್ಲಿರುವದು ಏಷ್ಯಾದ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದಿರುವ ಕೊಡಗಿನ ಎಸ್.ವಿ. ಸುನಿಲ್ ಮಾತ್ರ.
ಇಬ್ಬರು ಹೊಸಬರು
ಕೊಡಗಿನ ಕ್ರೀಡಾ ಇತಿಹಾಸಕ್ಕೆ ಕಾಮನ್ವೆಲ್ತ್ ಕ್ರೀಡೆಯ ಮೂಲಕ ಇಬ್ಬರು ಹೊಸ ಕ್ರೀಡಾತಾರೆಯರು ರಂಗ ಪ್ರವೇಶಿಸುತ್ತಿದ್ದಾರೆ. ಸುಂಟಿಕೊಪ್ಪ ಗದ್ದೆಹಳ್ಳದ ನಿವಾಸಿ ಪಟ್ಟೆಮನೆ ಉದಯ್ ಕುಮಾರ್ ಹಾಗೂ ಗಿರಿಜಾ ದಂಪತಿಯ ಪುತ್ರಿ ನವನೀತಾ ಇದೇ ಪ್ರಥಮ ಬಾರಿಗೆ ಬಾಸ್ಕೆಟ್ಬಾಲ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾಳೆ.
ಸೋಮವಾರಪೇಟೆ ಕಾರೆಕೊಪ್ಪದ ಜೀವನ್ ಕಾರೆಕೊಪ್ಪ ಮತ್ತೊಬ್ಬ ಕ್ರೀಡಾಪಟು ಅಪ್ಪಟ ಸ್ಥಳೀಯ ಪ್ರತಿಭೆಯಾಗಿರುವ ಜೀವನ್ 4x400 ಮೀ. ರಿಲೇಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದು, ಈತ ಅಲ್ಲಿನ ಸುರೇಶ್ ಹಾಗೂ ಶಕುಂತಲಾ ದಂಪತಿಯ ಪುತ್ರ,