ಮೂರ್ನಾಡು, ಏ. 3: ಕಟ್ಟೆಮಾಡು ಗ್ರಾಮದ ಪರಂಬುವಿಗೆ ಸಾಗುವ ರಸ್ತೆ ತೀರಾ ಹದಗೆಟ್ಟಿದ್ದು, ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳದಿದ್ದರೆ ಮುಂದಿನ ಚುನಾವಣೆ ಬಹಿಷ್ಕರಿಸಲಾಗುವದು ಎಂದು ಕಟ್ಟೆಮಾಡು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಾಡುವಿನಿಂದ ಪರಂಬುವಿಗೆ ತೆರಳುವ ರಸ್ತೆಯು 3.5 ಕಿ.ಮೀಟರ್ ಇದ್ದು, 350ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದಾರೆ. ರಸ್ತೆಯು ಸಂಪೂರ್ಣವಾಗಿ ಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಶಾಲಾ ವಾಹನಗಳು ಪ್ರತಿನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು ವಾಹನ ಚಾಲಕರು ಪಾಡು ಪಡುವಂತಾಗಿದೆ. ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವದೇ ಪ್ರಯೋಜನ ದೊರಕಲಿಲ್ಲ ಎಂದು ದೂರಿದ್ದಾರೆ.

ಕಟ್ಟೆಮಾಡು ಗ್ರಾಮದಲ್ಲಿ ಪಾಣತ್ತಲೆ, ಸಾದೇರ, ಪೋತಂಡ್ರ ಕುಟುಂಬಗಳಿಗೆ ಸಾಗುವ ರಸ್ತೆ ಸುಮಾರು 1.5 ಕಿ.ಮೀಟರ್ ಇದ್ದು, ಇದುವರೆಗೆ ರಸ್ತೆಗೆ ಡಾಮರೀಕರಣಗೊಂಡಿಲ್ಲ. ಕಿರಿದಾದ ರಸ್ತೆ ಇದಾಗಿದ್ದು, ಗುಂಡಿಮಯಗೊಂಡು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇದುವರೆಗೆ ಯಾವದೇ ರೀತಿಯ ಅನುದಾನ ಕೂಡ ರಸ್ತೆ ಅಭಿವೃದ್ಧಿಗೆ ದೊರಕದೆ ಇರುವದು ವಿಪರ್ಯಾಸ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಗ್ರಾಮದಲ್ಲಿ ಕಟ್ಟೆಮಾಡು ಬ್ಲಾಕ್ ಎ ಮತ್ತು ಕಟ್ಟೆಮಾಡು ಬ್ಲಾಕ್ 1ರಲ್ಲಿ ಮರಳು ತೆಗೆಯಲು ಟೆಂಡರ್ ನೀಡಲಾಗಿದೆ. ರಸ್ತೆಗಳೇ ಇಲ್ಲದೆ ಇರುವ ಸ್ಥಳದಲ್ಲಿ ಮರಳು ತೆಗೆಯಲು ಟೆಂಡರ್ ನೀಡಲಾಗಿದೆ. ಬ್ಲಾಕ್ ಎನಲ್ಲಿ ಹೊಳೆಗೆ ಸಾಗಲು ರಸ್ತೆ ಇಲ್ಲದಿದ್ದು, ಸಾದೇರ ಕುಟುಂಬಸ್ಥರಿಗೆ ಸೇರುವ ಸ್ಮಶಾನದ ಮೂಲಕ ಮರಳು ತೆಗೆಯಲು ಗುರುತಿಸಿದ ಸ್ಥಳಕ್ಕೆ ತೆರಳಬೇಕಾಗಿದೆ. ಈ ರಸ್ತೆ ಮೂಲಕ ಮರಳು ಸಾಗಾಣಿಕೆಗೆ ಅವಕಾಶ ಕಲಿಸುವದಿಲ್ಲ. ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ ಟೆಂಡರ್ ನೀಡಿದ್ದು, ಇದರಿಂದ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ ಇಲಾಖೆ ಇತ್ತ ಕಡೆ ಗಮನ ಹರಿಸಿ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ ಎಂದು ನಿವಾಸಿಗಳು ಬವಣೆ ವ್ಯಕ್ತಪಡಿಸಿದ್ದರು.

ಸಂಬಂಧಪಟ್ಟವರು ಚುನಾವಣೆ ಯೊಳಗೆ ಇತ್ಯರ್ಥಗೊಳಿಸಬೇಕು. ಇಲ್ಲವಾದಲ್ಲಿ ಸಾಮೂಹಿಕವಾಗಿ ಚುನಾವಣೆ ಬಹಿಷ್ಕರಿಸಲಾಗುವದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.