ಸೋಮವಾರಪೇಟೆ, ಏ. 3: ಆರಾಧನಾಲಯಗಳಿಂದ ಸಾಮಾಜಿಕ ಶಾಂತಿ, ಸಾಮರಸ್ಯ ನೆಲೆಸುತ್ತದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.
ಸಮೀಪದ ಅಬ್ಬೂರುಕಟ್ಟೆಯಲ್ಲಿ ಆಯೋಜಿಸಲಾಗಿದ್ದ ಸಂತ ಲಾರೆನ್ಸ್ ನೂತನ ಚರ್ಚ್ ನಿರ್ಮಾಣಕ್ಕೆ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಂದಿರ, ಚರ್ಚ್, ಮಠಗಳು ಇದ್ದ ಕಡೆ ಶಾಂತಿ ನೆಲೆಸುತ್ತದೆ. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಹೃದಯದಿಂದ ಪ್ರೀತಿಸಬೇಕು. ಅನ್ಯ ಧರ್ಮವನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.
ನೂತನ ಚರ್ಚ್ಗೆ ಶಂಕುಸ್ಥಾಪನೆ ನೆರವೇರಿಸಿದ ಮೈಸೂರು ಧರ್ಮಾಧ್ಯಕ್ಷ ಡಾ. ಕೆ.ಎ. ವಿಲಿಯಂ ಮಾತನಾಡಿ, ದೇವರು ಮಾನವನಿಗೆ ಎಲ್ಲವನ್ನೂ ಕರುಣಿಸಿದ್ದು, ಅದರ ಸ್ವಲ್ಪ ಭಾಗವನ್ನಾದರೂ ಪ್ರತಿಯೊಬ್ಬರೂ ದೇವಾಲಯಗಳಿಗೆ ನೀಡಬೇಕು ಎಂದರು.
ಮಂದಿರ, ಚರ್ಚ್, ಮಸೀದಿಗಳಿಗೆ ತೆರಳಿ ಎಲ್ಲಾ ಜನಾಂಗದವರೊಂದಿಗೆ ಬೆರೆಯುವದರಿಂದ ಪರಸ್ಪರ ಅನುಬಂಧ, ಸಹೋದರತ್ವ ಬೆಳೆಯುತ್ತದೆ. ಪ್ರೀತಿ, ದಯೆ, ಕರುಣೆ, ಅನುಕಂಪವಿರುವ ವ್ಯಕ್ತಿಯ ದೇಹದಲ್ಲಿ ದೇವರು ನೆಲೆಸಿರುತ್ತಾನೆ ಎಂದು ಹೇಳಿದರು.
ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿ, ಎಲ್ಲ ಧರ್ಮಗಳ ಸಾರವೂ ಒಂದೇ ಆಗಿದೆ. ಭಾತೃತ್ವದ ನೆಲಗಟ್ಟಿನಲ್ಲಿ ಬಲಿಷ್ಠ ಭಾರತವನ್ನು ಕಟ್ಟಲು ಎಲ್ಲರೂ ಮುಂದಾಗಬೇಕು. ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗ ಜನರು ಒಗ್ಗಟ್ಟಾಗಬೇಕು. ದೇವಾಲಯಗಳು ಒಗ್ಗಟ್ಟನ್ನು ತೋರ್ಪಡಿಸುವ ಕೇಂದ್ರಗಳಾಗಬೇಕು ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಚರ್ಚ್ಗಳ ಧರ್ಮಗುರುಗಳಾದ ಜೋಸೆಫ್ ಅಲೆಕ್ಸಾಂಡರ್, ಎಚ್.ಡಿ. ಮೋರಸ್, ಸಿ. ರಾಯಪ್ಪ, ಮದಲೆ ಮುತ್ತು, ವಿನ್ಸೆಂಟ್ ಮೊಂತೆರೋ, ತಾಲೂಕು ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್, ನೇರುಗಳಲೆ ಗ್ರಾಪಂ ಅಧ್ಯಕ್ಷ ಎ.ಎಚ್. ತಿಮ್ಮಯ್ಯ, ಜಿಪಂ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಪಪಂ ಸದಸ್ಯೆ ಶೀಲಾ ಡಿಸೋಜ ಸೇರಿದಂತೆ ಇತರರು ಉಪಸ್ಥಿತರಿದ್ದರು.