ಮಡಿಕೇರಿ, ಏ. 3: ಕೊಡಗಿನಲ್ಲಿ ಏಕೈಕ ಹದಿನಾಲ್ಕು ದೈವನೆಲೆಗಳ ಕ್ಷೇತ್ರವೆಂಬ ಹೆಗ್ಗಳಿಕೆಯಿರುವ, ನಗರದ ಶ್ರೀ ಸುಬ್ರಹ್ಮಣ್ಯ - ಶ್ರೀ ಮುತ್ತಪ್ಪ ಕ್ಷೇತ್ರದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಜಾತ್ರೆಗೆ ಇಂದಿನಿಂದ ಚಾಲನೆ ನೀಡಲಾಯಿತು. ಈ ಸಂಜೆ ಕ್ಷೇತ್ರದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ವೈದ್ಯ ಹಾಗೂ ಪ್ರಜಾಸತ್ಯ ಸಂಪಾದಕ ಡಾ. ಬಿ.ಸಿ. ನವೀನ್‍ಕುಮಾರ್ ಹಾಗೂ ದೇವಾಲಯ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಸನ್ನಿಧಿಯ ಶ್ರೀ ಸುಬ್ರಹ್ಮಣ್ಯ, ಮುತ್ತಪ್ಪ, ಅಯ್ಯಪ್ಪ, ಶಕ್ತಿ ಗಣಪತಿ, ಭಗವತಿ, ನಾಗರಾಜ, ನಾಗಯಕ್ಷಿ, ನಾಗಬನ, ತಿರುವಪ್ಪನ್, ವಿಷ್ಣುಮೂರ್ತಿ, ಮಹಾಗುಳಿಗ, ಶಿವÀಭೂತಂ, ಶ್ರೀಗುರು, ಪೊವ್ವಾದಿ, ಕುಟ್ಟಿಚಾತನ್, ಯಕ್ಷಿ ಸಹಿತ ದೈವಗಳ ವಾರ್ಷಿಕೋತ್ಸವವು ಇದೇ ಸಂದರ್ಭ ಇಂದಿನಿಂದ ತಾ. 7 ರ ತನಕ ನಡೆಯಲಿದೆ.

ತಾ. 4 ರಂದು ಬೆಳಿಗ್ಗೆ 7.30ಕ್ಕೆ ಕೇರಳದ ಕಡಂಬನಾಡು ಶ್ರೀ ಪಾರ್ಥ ಸಾರಥಿ ಸ್ಕಂದನ್ ತಂತ್ರಿಗಳ ನೇತೃತ್ವದಲ್ಲಿ ಗಣಹೋಮದೊಂದಿಗೆ ದೇವತಾ ಕೈಂಕರ್ಯಗಳು ಆರಂಭಗೊಳ್ಳಲಿವೆ. ಬಳಿಕ ಕಲಶಪೂಜೆ, ಕಲಶಾಭಿಷೇಕ, ಶ್ರೀ ಸುಬ್ರಹ್ಮಣ್ಯ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆಯೊಂದಿಗೆ ಭೂತಬಲಿ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ನೆರವೇರಲಿದೆ. ತಾ. 5 ರಂದು ಶ್ರೀ ಮುತ್ತಪ್ಪ ದೇವರ ಜಾತ್ರೆಗೆ ಚಾಲನೆಯೊಂದಿಗೆ ಬೆಳಿಗ್ಗೆ 10 ಗಂಟೆಗೆ ನಾಗದೇವರಿಗೆ ತಂಬೀಲ ಸೇವೆ, ಮುತ್ತಪ್ಪ ದೇವರ ಮಲೆ ಇಳಿಸುವದು. ವೆಳ್ಳಾಟಂ, ಮೊದಕಲಶ ಸ್ಥಾಪನೆ ಸೇವೆಗಳು ನಡೆಯಲಿವೆ.

ಮೆರವಣಿಗೆ : ತಾ. 6 ರಂದು ಶ್ರೀ ಮುತ್ತಪ್ಪ ದೇವರ ಕಲಶ ಮೆರವಣಿಗೆಯು ಸನ್ನಿಧಿಯಿಂದ ಹೊರಟು, ಸಂಜೆ 5 ಗಂಟೆಗೆ ಗಾಂಧಿ ಮೈದಾನದಲ್ಲಿ ಸಂಗಮಗೊಂಡು ಜನರಲ್ ತಿಮ್ಮಯ್ಯ ವೃತ್ತ, ಮುಖ್ಯರಸ್ತೆಗಾಗಿ ಸಾಗಲಿದ್ದು, ಕೇರಳದ ಪ್ರಸಿದ್ಧ ಕಲಾ ತಂಡಗಳಿಂದ ಸಿಂಗಾರಿಮೇಳ, ತೆಯ್ಯಂ, ಕಲಶ ಹಾಗೂ ತಾಲಾಪೊಲಿಯೊಂದಿಗೆ ಕಲಶ ಹಿಡಿದ ಮಾತೆಯರ ಸಹಿತ ಶೋಭಾಯಾತ್ರೆ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಮತ್ತು ದೇವಾಲಯ ಪದಾಧಿಕಾರಿಗಳು ಚಾಲನೆ ನೀಡಲಿದ್ದಾರೆ.

ರಾತ್ರಿ ಮೆರವಣಿಗೆ ಬಳಿಕ ಭಕ್ತರಿಗೆ ಸನ್ನಿಧಿಯಲ್ಲಿ ಅನ್ನದಾನ ನಡೆಯಲಿದೆ. ಅಂದು ಸಂಜೆ 4 ಗಂಟೆಯಿಂದ ದೇವಾಲಯದಲ್ಲಿ ಮುತ್ತಪ್ಪ ದೇವರ ಮಲೆ ಇಳಿಸುವದು, ವೆಳ್ಳಾಟಂ, ವಿಷ್ಣು ಮೂರ್ತಿ ಮೇಲೇರಿಗೆ ಅಗ್ನಿಸ್ಪರ್ಶ, ವಿವಿಧ ವೆಳ್ಳಾಟಂ, ತೆರೆಗಳು ಮುಂದುವರಿಯಲಿವೆ. ತಾ. 6 ರ ರಾತ್ರಿ ಹಾಗೂ 7 ರ ಬೆಳಗಿನ ಜಾವ ಕೂಡ ದೈವ ತೆರೆಗಳು ಜರುಗಲಿದ್ದು, ಹಗಲು 11.30 ಕ್ಕೆ ವಾರ್ಷಿಕ ಜಾತ್ರೋತ್ಸವ ಸಮಾರೋಪದೊಂದಿಗೆ ಧ್ವಜ ಅವರೋಹಣ ನೆರವೇರಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.