ಮಡಿಕೇರಿ, ಏ.3 :ಅಖಿಲ ಕೊಡವ ಸಮಾಜ ಹಾಗೂ ಮಡಿಕೇರಿ ಕೊಡವ ಸಮಾಜದ ಸಂಯುಕ್ತಾಶ್ರಯದಲ್ಲಿ ತಾ. 6ರಂದು ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 150ನೇ ವರ್ಷದ ಜನ್ಮೋತ್ಸವ ಕಾರ್ಯಕ್ರಮ ನಗರದಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ, ಅಖಿಲ ಕೊಡವ ಸಮಾಜದಿಂದ ಹರದಾಸ ಅಪ್ಪಚ್ಚ ಕವಿಯ ಜನ್ಮೋತ್ಸವ ಪ್ರಯುಕ್ತ ತಿಂಗಳಿಗೊಂದು ವಿಶೇಷ ಕಾರ್ಯಕ್ರಮಗಳನ್ನು ವಿವಿಧೆಡೆಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಮಡಿಕೇರಿ ಕೊಡವ ಸಮಾಜದಲ್ಲಿ ಜನ್ಮೋತ್ಸವ ಕಾರ್ಯಕ್ರಮವನ್ನು ಆಯೋಜಿಸಿ ರುವದಾಗಿ ತಿಳಿಸಿದರು.
ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ಹಾಗೂ ಜನ್ಮೋತ್ಸವ ಕಾರ್ಯಕ್ರಮದ ಸಹ ಸಂಚಾಲಕರಾದ ಮಾದೇಟಿರ ಬೆಳ್ಯಪ್ಪ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ತಾ. 6 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಕೊಡವ ಸಮಾಜದಲ್ಲಿ ಜನ್ಮೋತ್ಸವ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಾಂಡ ಎಸ್. ದೇವಯ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಹಿರಿಯ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ ಭಾಗವಹಿಸಲಿದ್ದು, ಅಖಿಲ ಕೊಡವ ಸಮಾಜದ ಪ್ರಮುಖ ಮಾತಂಡ ಸಿ. ಮೊಣ್ಣಪ್ಪ ಪ್ರಾಸ್ತಾವಿಕ ನುಡಿಗಳ ನ್ನಾಡಲಿದ್ದಾರೆ ಎಂದು ತಿಳಿಸಿದರು.
ಅಂದು ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಂದ, ಮಾದೇಟಿರ ಪ್ರಮೀಳಾ ಜೀವನ್ ಅವರ ನಿರ್ದೇಶನದಲ್ಲಿ ಹರದಾಸ ಅಪ್ಪಚ್ಚಕವಿ ಅವರ ನಾಟಕದ ಆಯ್ದ ಒಂದು ಭಾಗದ ನಾಟಕ ಪ್ರದರ್ಶನ ನಡೆಯಲಿದೆ.