ಮಡಿಕೇರಿ, ಏ. 3: ಮಡಿಕೇರಿ ನಗರದ ಶ್ರೀ ವಿನಾಯಕ ಕೊಡವ ಕೇರಿಯ 2017-18ನೇ ಮಹಾಸಭೆಯು ಕೊಡವ ಸಮಾಜ ಸಭಾಂಗಣದಲ್ಲಿ ಚೊಟ್ಟೆಯಂಡ ಕೆ. ಅಪ್ಪಾಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬೊಟ್ಟೋಳಂಡ ಕಾಶಿ ಅಚ್ಚಯ್ಯ ಅವರ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡು ಕಾರ್ಯದರ್ಶಿ ಬಲ್ಯಂಡ ಕೆ. ನಂಜಪ್ಪ ಹಿಂದಿನ ಮಹಾಸಭೆಯ ನಡಾವಳಿಕೆ ವಾಚಿಸಿದರು. ನಿರ್ದೇಶಕ ಕುಡುವಂಡ ಬಿ. ಉತ್ತಪ್ಪ ಲೆಕ್ಕಪತ್ರ ಮಂಡನೆ ಮಾಡಿದರೆ, ಖಜಾಂಚಿ ನೆರವಂಡ ಚರ್ಮಣ ಆಡಳಿತ ಮಂಡಳಿ ವರದಿಯನ್ನು ಸಭೆಯ ಮುಂದಿಟ್ಟರು. 10ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಪೆಮ್ಮಡಿಯಂಡ ಪಾಯಲ್ ಉತ್ತಪ್ಪಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು. ಅಧ್ಯಕ್ಷರ ಭಾಷಣದ ನಂತರ ಉಪಾಧ್ಯಕ್ಷ ಅಪ್ಪಂಡೇರಂಡ ಸನ್ನಿ ಪೂಣಚ್ಚ ವಂದನೆ ಸಲ್ಲಿಸಿದರು. ರಾಷ್ಟ್ರಗೀತೆ ಹಾಗೂ ಊಟೋಪಚಾರದೊಂದಿಗೆ ಸಭೆ ಮುಕ್ತಾಯಗೊಂಡಿತು.