ದಲಿತ ಶಾಸಕರ ಮನೆಗಳಿಗೆ ಬೆಂಕಿ

ರಾಜಸ್ತಾನ, ಏ. 3: ಇಲ್ಲಿನ ಕಾರೌಲಿ ಜಿಲ್ಲೆಯ ಹಿಂದಾನ್ ಪಟ್ಟಣದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಗಲಭೆಯ ವೇಳೆ ಉದ್ರಿಕ್ತ ಗುಂಪು ದಲಿತ ಶಾಸಕರು, ಮಾಜಿ ಶಾಸಕರ ಮನೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಗುವಿನ ಪರಿಸ್ಥಿತಿ ಉಂಟಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಹಿರಿಯ ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 5 ಸಾವಿರಕ್ಕೂ ಹೆಚ್ಚು ಉದ್ರಿಕ್ತ ಗುಂಪೆÇಂದು ಹಾಲಿ ಶಾಸಕ ರಾಜಕುಮಾರ್ ಜಾಠವ್ ಮತ್ತು ಕಾಂಗ್ರೆಸ್ಸಿನ ಮಾಜಿ ಶಾಸಕ ಬಾರೊಸಿಲಾಲ್ ಜಠಾವ್ ಅವರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಜಿಲ್ಲಾಧಿಕಾರಿ ಕಾರೌಲಿ ಅಭಿಮನ್ಯು ಕುಮಾರ್ ತಿಳಿಸಿದ್ದಾರೆ. ವಿವಿಧ ದಲಿತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಮಾರನೇ ದಿನವಾದ ಇಂದು ಈ ಘಟನೆ ನಡೆದಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಎಸ್‍ಸಿ-ಎಸ್‍ಟಿ ಕಾಯ್ದೆ ಆದೇಶಕ್ಕೆ ತಡೆ ಇಲ್ಲ

ನವದೆಹಲಿ, ಏ. 3: ನಾವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ಎಸ್‍ಸಿ-ಎಸ್‍ಟಿ) ದೌರ್ಜನ್ಯ ತಡೆ ಕಾಯ್ದೆ ಕುರಿತಂತೆ ನೀಡಲಾಗಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆ ಕುರಿತಂತೆ ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶ ಬಗ್ಗೆ ವಿರೋಧ ಪಕ್ಷಗಳು ಸೇರಿದಂತೆ ದೇಶದಾದ್ಯಂತ ತೀವ್ರ ವಿರೋಧಗಳು ವ್ಯಕ್ತವಾದ ಹಿನ್ನೆಲೆ ಕೇಂದ್ರ ಸರ್ಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿತ್ತು. ಇದರಂತೆ ಇಂದು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ್ದು, ಎಲ್ಲಾ ಪಕ್ಷಗಳೂ ಎರಡು ದಿನಗಳೊಳಗಾಗಿ ಪ್ರತಿಕ್ರಿಯೆಗಳನ್ನು ನೀಡುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ನಾವು ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಯ ವಿರುದ್ಧವಿಲ್ಲ, ನಮ್ಮ ತೀರ್ಪಿನ ಉದ್ದೇಶ ಅಮಾಯಕರ ರಕ್ಷಣೆಯಾಗಿದೆ.

60 ಕ್ಷೇತ್ರಗಳಲ್ಲಿ ಶಿವಸೇನೆ ಸ್ಪರ್ಧೆ

ಚಿಕ್ಕಮಗಳೂರು, ಏ. 3: ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, ಶಿವಸೇನೆಯನ್ನು ಶ್ರೀರಾಮಸೇನೆ ಸಂಪೂರ್ಣವಾಗಿ ಬೆಂಬಲಿಸುತ್ತದೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ನೇತೃತ್ವದಲ್ಲಿ 60 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ ಎಂದು ಮಂಗಳವಾರ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೀವರ್ಗಿ ವಿಧಾನಸಭೆ ಕ್ಷೇತ್ರದಿಂದ ಸಿದ್ದಲಿಂಗ ಸ್ವಾಮೀಜಿ ಸ್ಪರ್ಧಿಸುತ್ತಾರೆ. ತಾನು ಶೃಂಗೇರಿ ಅಥವಾ ತೇರದಾಳ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಈ ಬಗ್ಗೆ ಎರಡು ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವದಾಗಿ ತಿಳಿಸಿದರು. ನಾವು ಹಿಂದುತ್ವಕ್ಕಾಗಿ ರಾಜಕೀಯ ಮಾಡುತ್ತೇವೆ ಹೊರತು, ರಾಜಕೀಯಕ್ಕಾಗಿ ಹಿಂದುತ್ವವಲ್ಲ ಎಂದು ಮುತಾಲಿಕ್ ಸ್ಪಷ್ಟಪಡಿಸಿದರು.

ಅಪ್ರಚೋದಿತ ಧಾಳಿ : ಓರ್ವ ಯೋಧ ಹುತಾತ್ಮ

ಜಮ್ಮು, ಏ. 3: ಜಮ್ಮು ಮತ್ತು ಕಾಶ್ಮೀರ ಕೃಷ್ಣಘಾಟಿಯಲ್ಲಿ ಪಾಕಿಸ್ತಾನ ಸೇನೆ ನಡೆಸಿದ್ದ ಅಪ್ರಚೋದಿತ ಗುಂಡಿನ ಧಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐವರು ಯೋಧರ ಪೈಕಿ ಓರ್ವ ಯೋಧ ಹುತಾತ್ಮರಾಗಿದ್ದಾರೆಂದು ಮಂಗಳವಾರ ತಿಳಿತುಬಂದಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಜ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಈ ವೇಳೆ ಪಾಕಿಸ್ತಾನ ಸೇನೆ ನಡೆಸಿದ್ದ ಅಪ್ರಚೋದಿತ ಗುಂಡಿನ ಧಾಳಿಗೆ ಐವರು ಯೋಧರು ಗಾಯಗೊಂಡಿದ್ದರು. ಐವರ ಪೈಕಿ ಇದೀಗ ಓರ್ವ ಯೋಧ ಹುತಾತ್ಮರಾಗಿದ್ದು, ಉಳಿದ ನಾಲ್ವರು ಯೋಧರಲ್ಲಿ ಓರ್ವ ಯೋಧನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ಅಘೋಷಿತ ತುರ್ತು ಪರಿಸ್ಥಿತಿ:ತೊಗಾಡಿಯಾ ಟೀಕೆ

ನವದೆಹಲಿ, ಏ. 3: ಸುಳ್ಳು ಸುದ್ದಿ ಪ್ರಕಟಿಸುವ ಪತ್ರಕರ್ತರ ಮಾನ್ಯತೆ ರದ್ದುಗೊಳಿಸುವ ಕೇಂದ್ರದ ನಿರ್ಧಾರ ಅಘೋಷಿತ ತುರ್ತು ಸ್ಥಿತಿಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ. ಮಾಧ್ಯಮ ಎನ್ನುವದು ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಇಂತಹಾ ಅಂಗವೊಂದರÀ ದನಿಯನ್ನು ಮೊಟಕಾಗಿಸುವದು ನಾಗರಿಕ ಹಕ್ಕುಗಳಿಗೆ ಅಪಾಯಕಾರಿ ಎಂದು ವಿಹೆಚ್‍ಪಿ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ. ಸರ್ಕಾರದ ಈ ನಿಲುವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದೊಂದು ಅಘೋಷಿತ ತುರ್ತು ಸ್ಥಿತಿಯಾಗಲಿದೆ ಎಂದು ತೊಗಾಡಿಯಾ ಹೇಳಿದ್ದಾರೆ.

ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ರಾಜೀನಾಮೆ

ಹಾವೇರಿ, ಏ. 3: ಬಸವ ಕಲ್ಯಾಣದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಮಂಗಳವಾರ ಸ್ಪೀಕರ್ ಕೆ.ಬಿ. ಕೋಳಿವಾಡ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದಲ್ಲಿರುವ ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ನಿವಾಸಕ್ಕೆ ತೆರಳಿ ರಾಜೀನಾಮೆ ನೀಡಿದ್ದಾರೆ. ಬಿಜೆಪಿಗೆ ಸೇರುವ ಕುರಿತು ಕ್ಷೇತ್ರದಲ್ಲಿ ಯಾರದ್ದೂ ವಿರೋಧವಿಲ್ಲ. ಕ್ಷೇತ್ರದ ಬಿಜೆಪಿ ಮುಖಂಡರು ತನ್ನ ಜೊತೆಗಿದ್ದಾರೆ. ನಾಳೆ ತನ್ನ ನಿರ್ಧಾರ ಪ್ರಕಟಿಸುವದಾಗಿ ತಿಳಿಸಿದ್ದಾರೆ.

ಕೇದಾರನಾಥದಲ್ಲಿ ಸೇನಾ ಹೆಲಿಕಾಫ್ಟರ್ ಪತನ

ನವದೆಹಲಿ, ಏ. 3: ಕೇದಾರನಾಥ್ ದೇವಾಲಯದ ಬಳಿಯ ಹೆಲಿಪ್ಯಾಡ್‍ನಲ್ಲಿ ಭಾರತೀಯ ವಾಯು ಸೇನಾ ಸರಕು ಹೆಲಿಕಾಪ್ಟರ್ ಅಪಘಾತಕ್ಕೊಳಗಾಗಿದ್ದು, ಕಾಪ್ಟರ್‍ನಲ್ಲಿದ್ದ ಆರು ಸಿಬ್ಬಂದಿ ಗಾಯಗೊಂಡಿದ್ದಾರೆ. ಸೇನಾ ಪರಿಕರಗಳನ್ನು ಹೊತ್ತ ಸಾಗಿದ್ದ ಎಂಐ-17 ಹೆಸರಿನ ಸೇನಾ ಸರಕು ಹೆಲಿಕಾಪ್ಟರ್ ಕೇದಾರನಾಥ್ ದೇವಾಲಯದ ಬಳಿಯ ಹೆಲಿಪ್ಯಾಡ್‍ನಲ್ಲಿ ಇಳಿಯುವ ವೇಳೆ ಘಟನೆ ಸಂಭವಿಸಿದೆ. ಕಾಪ್ಟರ್ ಲ್ಯಾಡಿಂಗ್ ವೇಳೆ ಕಬ್ಬಿಣದ ವಸ್ತುವಿಗೆ ತಾಗಿದ ಕಾರಣ ಹೆಲಿಕಾಪ್ಟರ್ ಪತನಗೊಂಡಿದೆ. ಘಟನಾ ಸ್ಥಳಕ್ಕೆ ತಕ್ಷಣವೇ ಪೆÇಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ತೆರಳಿ ಆರು ಮಂದಿ ಸಿಬ್ಬಂದಿಯನ್ನು ರಕ್ಷಣೆ ಮಾಡಿದ್ದಾರೆ. ಹೆಲಿಕಾಪ್ಟರ್‍ನ ಹಿಂಭಾಗದಲ್ಲಿ ಅಳವಡಿಸಿದ್ದ ರಷ್ಯಾ ನಿರ್ಮಿತ ತಿರುಗುವ ಚಕ್ರ ಹೊರ ಬಂದಿದ ಕಾರಣ ಘಟನೆ ನಡೆದಿದೆ ಎಂದು ಭಾರತೀಯ ವಾಯು ಸೇನೆ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿ 2 ದಿನ ಮಳೆ ಸಾಧ್ಯತೆ

ಬೆಂಗಳೂರು, ಏ. 3: ರಾಜ್ಯಾದ್ಯಂತ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಛತ್ತೀಸ್‍ಗಡದಿಂದ ತಮಿಳುನಾಡುವರೆಗೆ ಟ್ರಫ್ (ಮೋಡಗಳ ಸಾಲು) ಇರುವ ಹಿನ್ನೆಲೆ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು. ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದೆ. ಬೆಂಗಳೂರಿನಲ್ಲಿ ಕೂಡ ಮಳೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.