ಸೋಮವಾರಪೇಟೆ,ಏ.2: ‘ಮೊದಲು ಕಾಲೋನಿಗೆ ರೋಡ್ ಮಾಡಿಕೊಡಿ, ಆಮೇಲೆ ವೋಟ್ ಕೇಳೋಕೆ ಬನ್ನಿ’ ಎಂದು ಸಮೀಪದ ಹಾನಗಲ್ಲು ಗ್ರಾಮ, ಸಿದ್ದಾರ್ಥ ಬಡಾವಣೆಯ ಆದಿಕರ್ನಾಟಕ ಸಂಘ(ಬಲಗೈ)ದ ಪದಾಧಿಕಾರಿಗಳು ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಚ್.ಕೆ. ಮಹೇಂದ್ರ, ಹಾನಗಲ್ಲು ಮತ್ತು ಹಾನಗಲ್ಲು ಶೆಟ್ಟಳ್ಳಿ ಗ್ರಾಮಗಳ ಮೂಲಕ ಶಾಂತಳ್ಳಿಗೆ ತೆರಳುವ ಸಂಪರ್ಕ ರಸ್ತೆ ಕಳೆದ ಹಲವು ವರ್ಷಗಳಿಂದ ದುಸ್ಥಿತಿಯಲ್ಲಿದ್ದು, ಯಾವದೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಮುಂದಾಗದೇ ಇರುವದರಿಂದ ಈ ಬಾರಿ ಚುನಾವಣಾ ಬಹಿಷ್ಕಾರ ಮಾಡುವ ಬಗ್ಗೆ ಗ್ರಾಮಸ್ಥರು ಚಿಂತನೆ ನಡೆಸುತ್ತಿದ್ದೇವೆ ಎಂದರು.

ಕಳೆದ 25 ವರ್ಷಗಳಿಂದ ಸಂಪರ್ಕ ರಸ್ತೆಯ ದುರಸ್ತಿಯಾಗಿಲ್ಲ. 13 ಕುಟುಂಬದ 70 ಸದಸ್ಯರು ಸಿದ್ಧಾರ್ಥ ಬಡಾವಣೆಯಲ್ಲಿ ವಾಸವಿದ್ದು, ಪರಿಶಿಷ್ಟ ಜನಾಂಗಕ್ಕೆ ಸೇರಿರುವದರಿಂದ ಈ ಬಡಾವಣೆ ನಿರ್ಲಕ್ಷ್ಯಕ್ಕೀಡಾಗಿದೆ. ಹಾನಗಲ್ಲು ಮತ್ತು ಹಾನಗಲ್ಲು ಶೆಟ್ಟಳ್ಳಿ ಗ್ರಾಮಕ್ಕೆ ರಸ್ತೆಗಳು ಮಂಜೂರಾಗುತ್ತವೆ. ಆದರೆ ನಮ್ಮ ಕಾಲೋನಿ ರಸ್ತೆ ಬಗ್ಗೆ ಮಾತ್ರ ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.

ರಸ್ತೆ ದುಸ್ಥಿತಿಯ ಬಗ್ಗೆ ಗ್ರಾ.ಪಂ. ಜನಪ್ರತಿನಿಧಿಗಳು, ತಾ.ಪಂ., ಜಿಲ್ಲಾ ಪಂಚಾಯಿತಿ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗಿಲ್ಲ. 1968ರಲ್ಲಿ ಗ್ರಾಮದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ತೆರೆದ ಬಾವಿಯನ್ನು ನಿರ್ಮಿಸ ಲಾಗಿದೆ. ಇದರೊಂದಿಗೆ ಮನೆಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಉದ್ದೇಶದಿಂದ ಸಿಸ್ಟನ್ ಅಳವಡಿಸ ಲಾಗಿದೆ. ಆದರೆ, ಇವೆರಡಕ್ಕೂ ಮುಚ್ಚಳವನ್ನು ಹಾಕದೆ, ಅದೇ ನೀರನ್ನು ಸರಬರಾಜು ಮಾಡಲಾಗು ತ್ತಿದೆ. ಕಳೆದ 6 ತಿಂಗಳಿನಿಂದ ಅದೂ ಸಹ ದುರಸ್ತಿಗೀಡಾಗಿದ್ದು, ಈ ಬಗ್ಗೆಯೂ ಗಮನಹರಿಸಿಲ್ಲ ಎಂದು ದೂರಿದರು.

ಕೂಡಲೇ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಗ್ರಾಮದ ಮತದಾರರು ಮತದಾನದಲ್ಲಿ ಪಾಲ್ಗೊಳ್ಳದೇ ದೂರ ಉಳಿಯುವ ಬಗ್ಗೆ ಚಿಂತಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಾದರೂ ಗಮನಹರಿಸಬೇಕು ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಬಡಾವಣೆ ನಿವಾಸಿಗಳಾದ ಎಚ್.ಬಿ. ಮಂಜುನಾಥ್, ಎಚ್.ಜೆ. ವಿಜಯ, ಎಚ್.ಎಂ. ರವಿ ಹಾಗೂ ಎಚ್.ಕೆ. ಸುರೇಂದ್ರ ಉಪಸ್ಥಿತರಿದ್ದರು.