ಮಡಿಕೇರಿ, ಏ. 1: ಪ್ರಸಕ್ತ ವರ್ಷಾರಂಭದಿಂದ ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರುತ್ತಿದ್ದರೂ, ನಡು ನಡುವೆ ವರುಣ ಕೃಪೆ ತೋರುವ ಮೂಲಕ ಒಂದಿಷ್ಟು ಭುವಿಗೆ ತಂಪೆರೆದು ನದಿಯೊಡಲಿನಲ್ಲಿ ಜಲಧಾರೆ ಹರಿಯುವಂತಾಗಿದೆ. ಮಡಿಕೇರಿಯಲ್ಲಿ ಇಂದು ಸಂಜೆ ಸಿಡಿಲು - ಗುಡುಗು ಆರ್ಭಟ ಜೋರಾಗಿತ್ತು. ಆದರೆ, ತುಂತುರು ಮಳೆ ಇಳೆಯನ್ನು ತಂಪಾಗಿಸುವಷ್ಟು ಮಾತ್ರ ಬಿದ್ದು ರಾತ್ರಿವರೆಗೂ ಗೋಚರವಾಯಿತು. ಮೊನ್ನೆಯಷ್ಟೇ ಕೊಡಗಿನ ಹೆಬ್ಬಾಗಿಲು ಕುಶಾಲನಗರ ಹಾಗೂ ಕಾವೇರಿ ತಟದ ಕಣಿವೆ, ಕೂಡಿಗೆ (ಮೊದಲ ಪುಟದಿಂದ) ವ್ಯಾಪ್ತಿಯಲ್ಲಿ ಹಿಮದ ರಾಶಿಯಂತೆ ಆಲಿಕಲ್ಲು ಸಹಿತ ಭರ್ಜರಿ ಮಳೆಯಾಗಿದೆ. ಆ ದಿನವೊಂದರಲ್ಲೇ ಕೆಲವೆಡೆಗಳಲ್ಲಿ ಸರಾಸರಿ ಎರಡು ಇಂಚು ಮಳೆ ದಾಖಲಾಗಿದೆ.ಬದಲಾಗಿ ಸರಕಾರಿ ಇಲಾಖೆಗಳ ಅಂಕಿ - ಅಂಶ ಪ್ರಕಾರ 2017ರ ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಸರಾಸರಿ 87.80 ಇಂಚು ಮಳೆಯಾಗಿದ್ದು, ಮಡಿಕೇರಿ ತಾಲೂಕಿಗೆ 115..75 ಇಂಚು ದಾಖಲಾಗಿದೆ. ಕಳೆದ ಜನವರಿಯಿಂದ ಇದುವರೆಗೆ 2.26 ಇಂಚು ಸರಾಸರಿ ಮಳೆಯಾಗಿದೆ.

ಸೋಮವಾರಪೇಟೆ ತಾಲೂಕಿಗೆ ಡಿಸೆಂಬರ್ ಅಂತ್ಯಕ್ಕೆ 73.24 ಇಂಚು ಹಾಗೂ ಪ್ರಸಕ್ತ ಮಾರ್ಚ್ ಅಂತ್ಯಕ್ಕೆ 1.61 ಇಂಚು ಮಳೆ ಗೋಚರಿಸಿದೆ. ಅತ್ತ ವೀರಾಜಪೇಟೆ ತಾಲೂಕಿನಲ್ಲಿ ವಷಾರ್ಂತ್ಯಕ್ಕೆ 87.80 ಇಂಚು ಮಳೆಯಾಗಿದ್ದು, ಪ್ರಸಕ್ತ ಅವಧಿಗೆ 1.63 ಇಂಚು ಸರಾಸರಿ ಮಳೆ ಆಗಿದೆ. ಆದರೆ, ಅನೇಕ ಕಡೆಗಳಲ್ಲಿ ಈ ಲೆಕ್ಕಾಚಾರಕ್ಕೆ ವ್ಯತಿರಿಕ್ತವಾಗಿ ದಿನವೊಂದರಲ್ಲೇ ಯುಗಾದಿಯ ಒಂದೆರಡು ದಿವಸ ಮತ್ತು ಈಚೆಗೆ ಎರಡು ದಿನ ಹಿಂದೆ ಅಲ್ಲಲ್ಲಿ 2ರಿಂದ 21/2 ಇಂಚು ಮಳೆಯಾಗಿರುವ ಮಾಹಿತಿ ಲಭಿಸಿದೆ. ಇಂದು ಕೂಡ ಗುಡುಗು ಸಹಿತ ಕೆಲವೆಡೆ ಮಳೆಯಾಗಿದೆ.

ಬೆಳೆಯಲ್ಲಿ ಗುರಿ

ಇನ್ನು ಜಿಲ್ಲೆಯಲ್ಲಿ ಬೇಸಿಗೆ ಬೆಳೆಯು ಸುಮಾರು 25 ಹೆಕ್ಟೇರ್ ಭತ್ತ ಕೃಷಿ ಪೈಕಿ 14 ಹೆಕ್ಟೇರ್ ಸಾಧನೆಯೊಂದಿಗೆ ಶೇ.56 ಗುರಿ ತಲುಪುವಂತಾಗಿದೆ. 25 ಹೆಕ್ಟೇರ್ ಅಲಸಂಡೆ ಪೈಕಿ 7.50 ಹೆಕ್ಟೇರ್ ಬೆಳೆದು ಶೇ.30 ಗುರಿ ತಲಪಿದರೆ, ನೆಲಗಡಲೆ 5 ಹೆಕ್ಟೇರ್ ಪೈಕಿ 7 ಹೆಕ್ಟೇರ್ ಬೆಳೆದು ಶೇ. 140 ಸಾಧನೆ ಕಂಡುಬಂದಿದೆ.