ಮಡಿಕೇರಿ, ಏ. 1 ಮೂರ್ನಾಡು ದಲಿತ ನಾಗಾಸ್ ಕ್ರೀಡಾ ಅಕಾಡೆಮಿ ವತಿಯಿಂದ ತಾ. 27 ರಿಂದ 29 ರವರೆಗೆ 17ನೇ ವರ್ಷದ ದಲಿತ ನಾಗಾಸ್ ಕ್ರೀಡಾಕೂಟ ಮೂರ್ನಾಡಿನ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಕಾಡೆಮಿಯ ಅಧ್ಯಕ್ಷ ದಿನೇಶ್ ಪೆಗ್ಗೋಲಿ, ಕ್ರೀಡಾಕೂಟದಲ್ಲಿ ಕ್ರಿಕೆಟ್, ಥ್ರೋಬಾಲ್, ಹಗ್ಗಜಗ್ಗಾಟ, ಪುಟಾಣಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಥ್ರೋಬಾಲ್, ಹಗ್ಗಜಗ್ಗಾಟ ಸ್ಪರ್ಧೆಗಳು ತಾ. 29 ರಂದು ನಡೆಯಲಿದ್ದು, ಈ ಸ್ಪರ್ಧೆಗಳಿಗೆ ಹೆಸರು ನೋಂದಣಿ ಅವಶ್ಯವಿಲ್ಲ.

ತಂಡಗಳು ಆ ದಿನವೇ ಮೈದಾನಕ್ಕೆ ಆಗಮಿಸಿ ಪಂದ್ಯಗಳಲ್ಲಿ ಪಾಲ್ಗೊಳ್ಳಬಹುದೆಂದು ಮಾಹಿತಿ ನೀಡಿ, ಕ್ರೀಡಾಕೂಟದ ಸಂದರ್ಭ ದಲಿತ ಸಮೂಹದ ಇಬ್ಬರು ಸಾಧಕರನ್ನು ಸನ್ಮಾನಿಸಲಾಗುತ್ತದೆಂದು ತಿಳಿಸಿದರು.

ಕ್ರಿಕೆಟ್ ಪಂದ್ಯಾವಳಿ ವಿಜೇತರಿಗೆ 25 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ 15 ಸಾವಿರ ಮತ್ತು ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಥ್ರೋಬಾಲ್‍ನಲ್ಲಿ ಪ್ರಥಮ ರೂ. 5 ಸಾವಿರ, ದ್ವಿತೀಯ ರೂ. 3 ಸಾವಿರ ನಗದು, ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ರೂ. 7,777 ಮತ್ತು ದ್ವಿತೀಯ ರೂ. 3,333 ನಗದು ಬಹುಮಾನವನ್ನು ನೀಡಲಾಗುತ್ತದೆಂದು ತಿಳಿಸಿದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಗಳು ತಾ. 20 ರೊಳಗಾಗಿ ನೋಂದಾಯಿಸಿಕೊಳ್ಳಲು ತಮ್ಮ ಹೆಸರನ್ನು ಅಧ್ಯಕ್ಷರು, ದಲಿತ ನಾಗಾಸ್ ಕ್ರೀಡಾ ಅಕಾಡೆಮಿ ಮೊ. 9945697855 ನ್ನು ಸಂಪರ್ಕಿಸಬಹುದಾಗಿದೆ.

ಗೋಷ್ಠಿಯಲ್ಲಿ ದಲಿತ ನಾಗಾಸ್ ಕ್ರೀಡಾ ಅಕಾಡೆಮಿ ಕಾರ್ಯದರ್ಶಿ ಹೆಚ್.ಪಿ. ಶಿವು, ವ್ಯವಸ್ಥಾಪಕ ಈರ ಸುಬ್ಬಯ್ಯ ಹಾಗೂ ಸದಸ್ಯ ಸೋಮಯ್ಯ ಉಪಸ್ಥಿತರಿದ್ದರು.