ಸುಂಟಿಕೊಪ್ಪ: ಇಲ್ಲಿನ ಮಾದಾಪುರ ರಸ್ತೆ ಬಳಿಯಿರುವ ಶ್ರೀ ವೃಕ್ಷೋದ್ಭವ ಶಕ್ತಿ ಮಹಾಗಣಪತಿ ದೇವಾಲಯದಲ್ಲಿ ಶ್ರೀ ಪಾರ್ವತಿ. ಲಕ್ಷ್ಮಿ ಸರಸ್ವತಿ. ಶ್ರೀ ಅಯ್ಯಪ್ಪ. ನಾಗ ಮತ್ತು ಆಂಜನೇಯ ದೇವರುಗಳ ಪ್ರತಿಷ್ಠಾಪನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಮಾ. 29 ಸಂಜೆ 6 ಗಂಟೆಗೆ ಯಾಗ ಶಾಲಾ ಪ್ರವೇಶ, ಗಂಗೆ ಪೂಜೆ, ಪುಣ್ಯಾಹ, ದೈವನಾಂದಿ, ಕಲಶ ಸ್ಥಾಪನೆ, ಜಲವಿಲಾಸ ನೆರವೇರಿಸಲಾಯಿತು.

ಮಾ. 30 ರಂದು ಬೆಳ್ಳಿಗೆ 6 ಗಂಟೆಯಿಂದ ವೇದನಾರಾಯಣ ನಿತ್ಯ ವಿಧಿಗಳು ಶ್ರೀ ಗಣಪತಿ ಹೋಮ ಆದಿತ್ಯಾದಿ ವಿವಿಧ ಹೋಮಗಳೊಂದಿಗೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿದ್ದು, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ದೊಡ್ಡಬಳ್ಳಾಪುರ ಶ್ರೀಘಾಟಿ ಸುಬ್ರಮಣ್ಯ ಕ್ಷೇತ್ರದ ಪ್ರದಾನ ಅರ್ಚಕ ಡಾ. ಟಿ.ಎಸ್. ರಾಮನಾಥ ಶರ್ಮ ಪೂಜಾ ಕೈಂಕರ್ಯ ನಡೆಸಿಕೊಟ್ಟರು. ಟ್ರಸ್ಟ್‍ನ ಕಾರ್ಯದರ್ಶಿ ಎ. ಲೋಕೇಶ್ ಕುಮಾರ್ ಮಾತನಾಡಿ ಈ ದೇವಾಲಯದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ದೇವರುಗಳ ಮೂರ್ತಿ ಪೂಜೆಯನ್ನು ಸಾರ್ವಜನಿಕರು ಪ್ರತಿ ನಿತ್ಯ ಮಾಡಲು ಅವಕಾಶ ಕಲ್ಪಿಸಲಾಗಿದೆ. ದಿವಂಗತ ಮಾಣಿಕ್ಯ ಅವರ ಕನಸಿನಂತೆ 2003 ರಲ್ಲಿ ಸ್ಥಾಪಿಸಲಾದ ಶ್ರೀ ವೃಕ್ಷೋದ್ಭವ ಶಕ್ತಿ ಮಹಾಗಣಪತಿ ದೇವಾಲಯದಲ್ಲಿ ವಿವಿಧ ದೇವರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ ಎಂದರು. ಅಧ್ಯಕ್ಷ ಬಿ.ಎಸ್. ಸದಾಶಿವ ರೈ, ಉಪಾಧ್ಯಕ್ಷರಾದ ಎಂ. ಮಂಜುನಾಥ, ಬಿ.ವಿ. ಸುನೀಲ್ ಕುಮಾರ್, ಟಿ.ಕೆ. ವಿನೋದ್, ಬಿ.ಎಸ್. ರಮೇಶ, ದಿವಾಕರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾಲಕೃಷ್ಣ, ಖಜಾಂಚಿ ಶಿವಮಣಿ, ಟ್ರಸ್ಟಿಗಳಾದ ರಾಜಮ್ಮ, ವೀಣಾ, ಶೋಭ, ವಿಜಯಕುಮಾರ್, ಸುರೇಶ್ ಕುಮಾರ್ ಹಾಜರಿದ್ದರು.

ವಾರ್ಷಿಕ ನೇಮೋತ್ಸವ

ಸುಂಟಿಕೊಪ್ಪ: ಐಗೂರಿನ ಪಾಷಣ ಮೂರ್ತಿ ಹಾಗೂ ಶ್ರೀ ಆಧಿಶಕ್ತಿ ಮಹಾತಾಯಿ ದೇವಾಲಯದ 42ನೇ ವರ್ಷದ ದೈವಗಳ ಕೋಲ ಹಾಗೂ ನೇಮೋತ್ಸವ ತಾ. 5 ರಿಂದ 10 ರವರೆಗೆ ನಡೆಯಲಿದೆ ಎಂದು ಧರ್ಮದರ್ಶಿ ಆನಂದ ಪೂಜಾರಿ ತಿಳಿಸಿದ್ದಾರೆ.