ಗೋಣಿಕೊಪ್ಪಲು, ಮಾ. 31: ನಾಗರಹೊಳೆ ರಾಷ್ಟ್ರೀಯ ಉದ್ಯಾನ ಸರಹದ್ದಿನಲ್ಲಿ ಬರುವ ಒಟ್ಟು ಏಳು ಉಪ ಆರೋಗ್ಯ ಕೇಂದ್ರಗಳಾದ ನಿಟ್ಟೂರು, ಕೊಟ್ಟಗೇರಿ, ಬಾಳೆಲೆ, ದೇವನೂರು, ಬಿಳೂರು, ಮಾಯ ಮುಡಿ ಹಾಗೂ ಕೋಣನಕಟ್ಟೆ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಆದಿವಾಸಿಗಳಿಗೆ ಉಪಯುಕ್ತ ಆರೋಗ್ಯ ಸೇವೆಗಾಗಿ ಸುಮಾರು 60 ವರ್ಷಗಳಿಗೂ ಹಿಂದೆ ಆರಂಭ ಗೊಂಡ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರ ಇದೀಗ ಹಲವು ಸಮಸ್ಯೆಗಳಿಂದಾಗಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆಗೆ ಹಲವು ಸೇವೆಯ ಕೊರತೆಯುಂಟಾಗಿದೆ. ಆಸ್ಪತ್ರೆಯ ಮುಂದೆ ‘24x7 ಹೆರಿಗೆ ಆಸ್ಪತ್ರೆ’ ಎಂಬ ಫಲಕವಿದೆ. ಆದರೆ ಪ್ರಸವ ವೇದನೆ ಸಂದರ್ಭ ಕಾರ್ಯ ನಿರ್ವಹಿಸಲು ಅಗತ್ಯ ಸಿಬ್ಬಂದಿಗಳೇ ಇಲ್ಲಿಲ್ಲ!?
ದಾನಿಗಳೊಬ್ಬರು 1956 ನೇ ಇಸವಿಯಲ್ಲಿ ನೀಡಿದ ನಾಲ್ಕೂವರೆ ಎಕರೆ ಜಾಗದಲ್ಲಿ 6 ಬೆಡ್ನ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಗೊಂಡು ಹಲವು ದಶಕಗಳು ಉತ್ತಮ ಸೇವೆಯನ್ನೇ ನೀಡುತ್ತಾ ಬಂದಿದ್ದರೂ ಇದೀಗ ರೋಗಗ್ರಸ್ತ ಆಸ್ಪತ್ರೆಯಾಗಿ ಪ್ರಾಥಮಿಕ ಸವಲತ್ತುಗಳಿಲ್ಲದೆ ಸೊರಗಿದೆ.
ಈ ಹಿಂದೆ ಇಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ, ಪ್ರಯೋಗಾಲಯ ತಜ್ಞರ ಸೇವೆ, ಎಲ್ಲ ಉಪಕೇಂದ್ರಗಳಲ್ಲಿಯೂ ಆರೋಗ್ಯ ಸಹಾಯಕಿಯರು, ದಾದಿಯರ ಸೇವೆ ಎಲ್ಲವೂ ಸಿಗುತ್ತಿತ್ತು. ಇದೀಗ ಇಲ್ಲಿನ ಆಸ್ಪತ್ರೆಯಲ್ಲಿ ಲೆಕ್ಕ ಬರೆಯಲು ಪ್ರಥಮ ದರ್ಜೆ ಗುಮಾಸ್ತನೇ ಇಲ್ಲ.ಇಲ್ಲಗಳ ಸರಮಾಲೆಯೇ ಇಲ್ಲಿದೆ. ಉತ್ತಮ ಪ್ರಯೋಗಾಲಯವಿದೆ. ರಕ್ತ, ಮೂತ್ರ ಇತ್ಯಾದಿ ಪರೀಕ್ಷೆಗೆ ತಜ್ಞರೇ ಇಲ್ಲ. 2016 ರಲ್ಲಿ ಇಲ್ಲಿಗೆ ಡಾ. ಪ್ರತಾಪ್ ಆರ್. ಎಂಬ ಆಯುಷ್ ವೈದ್ಯರು ನೇಮಕ ಗೊಂಡರು. ಸಿಬ್ಬಂದಿಗಳ ಕೊರತೆ ಯಿಂದಾಗಿ ಇವರ ಮೇಲೆ ಕೆಲಸ ಒತ್ತಡ ಅಧಿಕವಾಗಿದೆ. ಔಷಧಿ ಕೊರತೆ ಇಲ್ಲ. ಆದರೆ ಇಲ್ಲಿರುವ ಏಕೈಕ ಫಾರ್ಮಾಸಿಸ್ಟ್ ಸವಿತಾ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ. ಇವರ ಬದಲಿ ವ್ಯವಸ್ಥೆಗೆ ಇನ್ನೂ ಜಿಲ್ಲಾ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿಲ್ಲ.
ಏಪ್ರಿಲ್ 2017 ರಿಂದ ಈವರೆಗೆ ಒಟ್ಟು 48 ಹೆರಿಗೆಯನ್ನು ಇಲ್ಲಿ ಸುಸೂತ್ರವಾಗಿ ಮಾಡಲಾಗಿದೆ ಎಂದು ಹೇಳಲಾದರೂ 7 ಉಪಕೇಂದ್ರಗಳಿಗೆ ಕೇವಲ ಒಬ್ಬರು ಸುಜಾತ ಎಂಬ ದಾದಿ ಇದ್ದಾರೆ. ಆಸ್ಪತ್ರೆಯಲ್ಲಿ ಒಟ್ಟು ಮೂವರು ದಾದಿಯರ ಅವಶ್ಯಕತೆ ಇದ್ದು ಕೇವಲ ಒಬ್ಬರಿದ್ದಾರೆ. ಕಿರಿಯ ಆರೋಗ್ಯ ಸಹಾಯಕರ ಹುದ್ದೆಯಲ್ಲಿ ಎರಡೂ ಹುದ್ದೆ ಖಾಲಿ ಇದೆ. ಗ್ರೂಪ್ ಡಿ ನೌಕರರನ್ನು ಗುತ್ತಿಗೆ ಆಧಾರದಲ್ಲಿ ನಿಯೋಜಿಸಲಾಗಿದ್ದು 3 ರಲ್ಲಿ ಕೇವಲ ಇಬ್ಬರಿದ್ದಾರೆ. ಹೆರಿಗೆ ಸಂದರ್ಭ ಕೆಲವೊಮ್ಮೆ ಸಿಬ್ಬಂದಿವರ್ಗ ತೀವ್ರ ತೊಂದರೆ ಅನುಭವಿಸುತ್ತಿದ್ದು ಗೋಣಿ ಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಇಲ್ಲಿಂದ ಕಳುಹಿಸಿಕೊಡ ಬೇಕಾದ ಅನಿವಾರ್ಯತೆ ಎದುರಾಗಿದೆ.
ಗೋಣಿಕೊಪ್ಪಲಿನ ತುರ್ತು ಚಿಕಿತ್ಸಾ ವಾಹನವನ್ನು ಇಲ್ಲಿನ ಅಗತ್ಯಕ್ಕೆ ನಿಯೋಜಿಸಿರುವದೇ ಆಡಳಿ ತಾಧಿಕಾರಿಯ ಹೆಚ್ಚುಗಾರಿಕೆ. ತಾಲೂಕು ಆರೋಗ್ಯಾಧಿಕಾರಿಗಳೇ ಇಲ್ಲಿನ ಆಸ್ಪತ್ರೆ ಆಡಳಿತಾಧಿಕಾರಿಯಾಗಿದ್ದು ವಾರಕ್ಕೊಮ್ಮೆಯಾದರೂ ಭೇಟಿ ನೀಡುತ್ತಿಲ್ಲವೆಂದು ಇಲ್ಲಿನ ಸಾರ್ವಜನಿಕರು ಆರೋಪಿಸಿದ್ದಾರೆ.
ಕಾರ್ಮಾಡು, ಹತ್ತುಗಟ್ಟು ಅರಣ್ಯ, ಕಲ್ಲಳ ಹಾಗೂ ಮೂರ್ಕಲ್ಲು ಆದಿವಾಸಿಗಳೂ ಇದೇ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದ್ದು, ತಿಂಗಳಿಗೆ ಅಂದಾಜು 2000 ಕ್ಕೂ ಅಧಿಕ ಬಡ ಮಧ್ಯಮವರ್ಗದ ರೋಗಿಗಳು ಇದೇ ಆಸ್ಪತ್ರೆಗೆ ಈಗಲೂ ಭೇಟಿ ನೀಡುತ್ತಿದ್ದಾರೆ ಎಂದು ಅಂಕಿ ಅಂಶ ಹೇಳುತ್ತಿದೆ. ದಿನವೊಂದಕ್ಕೆ 100ಕ್ಕೂ ಅಧಿಕ ಹೊರರೋಗಿಗಳು ಭೇಟಿ ನೀಡುವದೂ ಇದೆ.
ಶುಶ್ರೂಷಕಿ ಪೂಜಾ ಎಂಬವರು ಕಳೆದ ಎರಡು ದಿನದಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಪ್ರಯೋಗಾಲಯ ತಜ್ಞರು ಹಾಗೂ ಫಾರ್ಮಾಸಿಸ್ಟ್, ಅನುಭವಿ ದಾದಿಯರ ಅಗತ್ಯ ಕಂಡು ಬಂದಿದೆ.
ಉದ್ದೇಶಿತ ಆಸ್ಪತ್ರೆ ಮಾಯಮುಡಿ, ನಿಟ್ಟೂರು, ಬಾಳೆಲೆ, ಪೆÇನ್ನಪ್ಪಸಂತೆ ಹಾಗೂ ಕಿರುಗೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರಿಗೆ ಆರೋಗ್ಯ ಸೇವೆಯನ್ನು ನೀಡಬೇಕಿದ್ದು, ಇದೀಗ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರು ಪೆÇನ್ನಂಪೇಟೆ, ಗೋಣಿಕೊಪ್ಪಲು ಆಸ್ಪತ್ರೆಯನ್ನು ಅವಲಂಬಿಸಿದರೆ, ದುರ್ಬಲ ವರ್ಗಕ್ಕೆ ಇಲ್ಲಿ ಸಕಾಲಿಕ ಸೇವೆ ಸಿಗುತ್ತಿಲ್ಲ.
ವೈದ್ಯರ ವಸತಿ ಗೃಹ ಒಳಗೊಂಡಂತೆ ಒಟ್ಟು 4 ವಸತಿ ಗೃಹಗಳು ನವೀಕರಣಗೊಳ್ಳುತ್ತಿವೆ. ಈ ಹಿಂದೆ ಸಿಬ್ಬಂದಿ ಹಾಗೂ ವೈದ್ಯರ ಕೊರತೆ ಮನಗಂಡು ನಿರ್ವಹಣೆಯನ್ನು ಉದ್ಭವ ಸ್ವಯಂ ಸೇವಾ ಸಂಸ್ಥೆಗೆ ವಹಿಸಲಾಗಿತ್ತು. ಆದರೆ, ಕೊಡ್ಲಿಪೇಟೆ ಯಲ್ಲಿ ಉದ್ಭವ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಟೀಕೆ ವ್ಯಕ್ತವಾದ ಹಿನ್ನೆಲೆ ಇಲ್ಲಿನ ಸಾರ್ವಜನಿಕರ ಪ್ರತಿರೋಧದಿಂದಾಗಿ ಉದ್ಭವ ಸಂಸ್ಥೆ ಇಲ್ಲಿ ಮುಂದುವರೆಯಲು ಅವಕಾಶ ನೀಡಲಿಲ್ಲ.
ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ಅವರು ಮುತುವರ್ಜಿ ವಹಿಸಿದ್ದಲ್ಲಿ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದೆ. ಈ ಬಗ್ಗೆ ಕೂಡಲೇ ಸ್ಪಂದಿಸಿ, ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಗ್ರಾಮಸ್ಥರು ಹಾಗೂ ಹೋರಾಟಗಾರರಾದ ಅರಮಣ ಮಾಡ ಸತೀಶ್ ದೇವಯ್ಯ, ಪೆÇನ್ನಿಮಾಡ ಜಯಾ ನಂಜಪ್ಪ, ಅರಮಣಮಾಡ ಹರೀಶ್ ಉತ್ತಪ್ಪ, ಬಾಚಮಾಡ ರಾಜೇಶ್, ರಕ್ಷಾ ಸಮಿತಿ ಅಧ್ಯಕ್ಷರಾದ ಬಾಳೆಲೆ ಗ್ರಾ.ಪಂ.ಅಧ್ಯಕ್ಷೆ ಕಾಂಡೇರ ಕುಸುಮಾ, ಸದಸ್ಯ ಕೇಶವ ಮೂರ್ತಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ ಮುಂತಾದವರು ಒತ್ತಾಯಿಸಿದ್ದಾರೆ.
ಇಲ್ಲಿನ ಆಂಬ್ಯುಲೆನ್ಸ್ ಚಾಲಕ ಅಯ್ಯಪ್ಪ ಉತ್ತಮ ಸೇವೆ ಸಲ್ಲಿಸುತ್ತಿದ್ದು, ವೈದ್ಯ ಡಾ. ಪ್ರತಾಪ್ ಬಗ್ಗೆಯೂ ಸಾರ್ವಜನಿಕವಾಗಿ ಉತ್ತಮ ಅಭಿಪ್ರಾಯವಿದೆ. ಇಲ್ಲಿನ ಅಗತ್ಯ ಸೇವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಪಡಿಸಿದ್ದಲ್ಲಿ ಎಲ್ಲಕ್ಕೂ ಗೋಣಿಕೊಪ್ಪಲು ಇತ್ಯಾದಿ ಆಸ್ಪತ್ರೆಯ ಅವಲಂಬನೆ ತಪ್ಪಿಸಬಹುದು ಎನ್ನುವದು ಗ್ರಾಮಸ್ಥರ ಅಭಿಪ್ರಾಯ.
- ಟಿ.ಎಲ್. ಶ್ರೀನಿವಾಸ್