ಅಂದು ಮಹಾವೀರ ಜಯಂತಿಯ ಪ್ರಯುಕ್ತ ಸರಕಾರಿ ರಜೆ. ಬ್ಯಾಂಕ್, ಅಂಚೆ ಇಲಾಖೆ, ತಾಲೂಕು ಕಚೇರಿಗಳೆಲ್ಲವೂ ಆ ದಿನ ಬಿಡುವಲ್ಲಿದ್ದವಾದರೂ, ಮಡಿಕೇರಿಯ ತಾಲೂಕು ಕಚೇರಿ ಬಳಿ ಇರುವ ಸರಕಾರಿ ಪಶುವೈದ್ಯ ಆಸ್ಪತ್ರೆ ಬೆಳಿಗ್ಗೆ 8.30 ರಿಂದಲೇ ಕಾರ್ಯನಿರತವಾಗಿತ್ತು.

ಒಬ್ಬ ನುರಿತ ವೈದ್ಯರೊಂದಿಗೆ ಇಬ್ಬರು ನರ್ಸ್‍ಗಳು ಸಾಲಲ್ಲಿ ನಿಂತ ನಾಲ್ಕು ಕಾಲಿನ ರೋಗಿಗಳಾದ ನಾಯಿಗಳನ್ನು ಆರೈಕೆ ಮಾಡುತ್ತಿದ್ದರು. ಈ ಎಲ್ಲಾ ರೋಗಿಗಳೂ ಒಂದೇ ರೀತಿಯ ಕಾಯಿಲೆಯಿಂದ ಬಳಲುತ್ತಿದ್ದು, ಇದು ಸಂಪೂರ್ಣವಾಗಿ ವಾಸಿಯಾಗದ ಖಾಯಿಲೆ ಎಂದು ಅರಿತ ಈ ನಾಯಿಗಳÀ ಪೋಷÀಕರು ಚಿಂತಿತರಾಗಿದ್ದರು.

ನಾಯಿಗಳಿಗೆ ಬರುವ ಸೋಂಕು ರೋಗಗಳಲ್ಲಿ ಮಾರಕವಾದ ರೋಗವೆಂದರೆ ‘ಕೇನಾಯಿನ್ ಡಿಸ್ಟೆಂಪರ್’. “ಇದು ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸುವ ಪ್ರಕೃತಿಯ ನೀತಿ,” ಎಂದು ಮಡಿಕೇರಿಯ ಸರಕಾರಿ ಪಶುವೈದ್ಯ ಆಸ್ಪತ್ರೆಯ ತಜ್ಞರಾದ ಡಾ. ಚಿದಾನಂದರವರು ತಿಳಿಸುತ್ತಾರೆ. ಹಸಿವಿನ ನಷ್ಟ, ಕಣ್ಣು-ಮೂಗಿನಲ್ಲಿ ಸೋರುವಿಕೆ, ವಾಂತಿ, ಕೆಮ್ಮು, ಅಸ್ವಸ್ಥತೆ ಈ ಡಿಸ್ಟೆಂಪರ್ ರೋಗದ ಪ್ರಮುಖ ಲಕ್ಷಣಗಳಾಗಿದ್ದು, ಹೆಚ್ಚಿನ ಪ್ರಕರಣಗಳಲ್ಲಿ ವೈದ್ಯಕೀಯ ಆರೈಕೆ ವಿಫಲವಾಗುತ್ತದೆ. ಈ ರೋಗವನ್ನು ಕಾಲಕಾಲಕ್ಕೆ ನೀಡುವ ವ್ಯಾಕ್ಸಿನೇಷನ್‍ನಿಂದ ನಿಯಂತ್ರಿಸಬಹುದೇ ಹೊರತು, ರೋಗ ಆಕ್ರಮಿಸಿದ ಮೇಲೆ ಸಂಪೂರ್ಣವಾಗಿ ಗುಣಪಡಿಸುವದು ಅಸಾಧ್ಯವೆಂದು ವೈದ್ಯರು ತಿಳಿಸುತ್ತಾರೆ.

ಹಾಗೆಂದು ಬಂದ ರೋಗಿಗಳನ್ನು ಆರೈಕೆ ಮಾಡದೆ, ಇದರ ರೋಗವನ್ನು ಗುಣಪಡಿಸಲಾಗದೆಂದು ಇವರು ಪೋಷÀಕರಿಗೆ ಹೇಳಿ ಕಳುಹಿಸುವುದಿಲ್ಲ. ಬದಲಿಗೆ, ರಜಾ ದಿನಗಳಲ್ಲೂ ಡಾ. ಚಿದಾನಂದರವರು ತಮ್ಮ ರೋಗಿಗಳಿಗೆ ಆರೈಕೆ ನೀಡುವರು. ಡಿಸ್ಟೆಂಪರ್ ಇರುವ ನಾಯಿಗಳಿಗೆ ಡ್ರಿಪ್ಸ್ ಹಾಕಿ, ರೋಗ ನಿರೋಧಕ ಇಂಜೆಕ್ಷನ್‍ಗಳನ್ನು ನೀಡಿ, ಕನಿಷ್ಟ ಮೂರು ದಿನಗಳ ನಿರಂತರ ಚಿಕಿತ್ಸೆ ನೀಡುತ್ತಾರೆ. “ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿದ್ದರೂ, ಈ ರೋಗದ ವಿವಿಧ ಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗುವದು,” ಎಂದು ಅವರು ತಿಳಿಸುತ್ತಾರೆ.

ಹೆಚ್ಚಾಗಿ ಒಣ ಹವೆಯಲ್ಲಿ ಪಸರಿಸುವ ಈ ಖಾಯಿಲೆ, ಗಾಳಿ, ರೋಗಿ ನಾಯಿಗಳೊಡನೆ ನೇರ ಸಂಪರ್ಕ, ಕೀಟಗಳಿಂದ ಹರಡುತ್ತದಲ್ಲದೆ ಎರಡು ವರ್ಷಕ್ಕೊಮ್ಮೆ ಮಾರಕವಾಗಿ ಹಬ್ಬುತ್ತದೆ ಎಂದು ತಿಳಿಸಿ, “ವ್ಯಾಕ್ಸಿನೇಷನ್‍ನಿಂದ ಮಾತ್ರ ನಾಯಿಗಳಿಗೆ ಈ ರೋಗದಿಂದ ಪರಿಹಾರ ಸಿಗುತ್ತದೆ. ನಾಯಿ ಮರಿಗಳಿಗೆ ಈ ರೋಗದಿಂದ ಹೆಚ್ಚ್ಚಿನ ಅಪಾಯವಿದ್ದು, ಇದನ್ನು ತಪ್ಪಿಸಲು ಗರ್ಭಿಣಿ ನಾಯಿಗೆ ವ್ಯಾಕ್ಸಿನೇಷನ್ ನೀಡುವದು ಅತ್ಯಗತ್ಯ,” ಎಂದು ತಿಳಿಸುತ್ತಾರೆ.

ಈ ವರ್ಷದ ಬೇಸಿಗೆಯಲ್ಲಿ ಹೆಚ್ಚಿನ ನಾಯಿಗಳು ಈ ಡಿಸ್ಟೆಂಪರ್ ರೋಗದಿಂದ ಬಳಲುತ್ತಿದ್ದರೆ, ಇನ್ನು ಹಲವು ನಾಯಿಮರಿಗಳು ‘ಪಾರ್‍ವೋ ವೈರಸ್ ಎನ್‍ಟ್ರೈಟಿಸ್’ ರೋಗದಿಂದ ಬಳಲುತ್ತಿದ್ದು, ಈ ರೋಗವೂ ನಾಯಿಗಳ ಜೀವಕ್ಕೆ ಮಾರಕವಾಗಬಹುದು ಎಂದು ವೈದ್ಯರು ತಿಳಿಸುತ್ತಾರೆ. ವಾಂತಿ ಹಾಗೂ ರಕ್ತ ಭೇದಿ ಈ ಕಾಯಿಲೆಯ ಮುಖ್ಯ ಲಕ್ಷಣವಾಗಿದ್ದು ವ್ಯಾಕ್ಸಿನೇಷನ್ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯ. ಆದರೂ, ಡಾ. ಚಿದಾನಂದರವರು ಮೂರು ದಿನ ನಿರಂತರವಾಗಿ ಇಂತಹ ನಾಯಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಿ, ಮಾನವನ ನಿಷ್ಠಾವಂತ ಜೀವಿಯಾದ ನಾಯಿಗಳಿಗೆ ಭರವಸೆಯ ಬದುಕನ್ನು ನೀಡುತ್ತಿದ್ದಾರೆ. ಭಾನುವಾರವಾಗಲಿ, ಸರಕಾರಿ ರಜಾ ದಿನವಾಗಲಿ ಡಾ. ಚಿದಾನಂದರವರು ತಮ್ಮ ರೋಗಿಗಳಿಗೆ ವಿಶೇಷÀ ಆರೈಕೆ ನೀಡಲು ಎಂದೂ ಸಿದ್ದ.

ನಾಯಿಗಳನ್ನು ಸಾಕುವದು ಮಾತ್ರವಲ್ಲದೆ, ಈ ಮೂಕಪ್ರಾಣಿಗಳ ಆರೈಕೆಯ ಬಗೆಗೆ, ಅವುಗಳಿಗೆ ಕಾಲಕಾಲಕ್ಕೆ ನೀಡಬೇಕಾದ ವ್ಯಾಕ್ಸಿನೇಷನ್‍ಗಳ ಬಗ್ಗೆ ತಿಳುವಳಿಕೆ ಅಗತ್ಯ. ಇದಲ್ಲದೆ, ಬಳಲುತ್ತಿರುವ ನಾಯಿಗಳನ್ನು ವೈದ್ಯರ ಬಳಿ ಕರೆದೊಯ್ಯುವದು ಮಾನವೀಯತೆಯ ಲಕ್ಷಣ. - ಪ್ರಜ್ಞಾ ಜಿ.ಆರ್.