ಚೆಟ್ಟಳ್ಳಿ: ಚೆಟ್ಟಳ್ಳಿಯ ಸಂತ ಸಬಾಸ್ಟಿನ್ ದೇವಾಲಯದಲ್ಲಿ ಬಲಿ ಪೂಜೆ ಹಾಗೂ ಧರ್ಮಸಭೆ ಕಾರ್ಯಕ್ರಮ ನಡೆಯಿತು. ದೇವಾಲಯದ ಫಾದರ್ ಸ್ಟೆಫೆನ್ ಜೋಸೆಫ್ ನೆರೆದಿದ್ದ ಭಕ್ತರಿಗೆ ಧರ್ಮದ ಪ್ರವಚನವನ್ನು ಬೋಧಿಸಿದರು. ನೆರೆದಿದ್ದ ಭಕ್ತರಿಂದ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಏಸುವಿನ ಬೋಧನೆಯಂತೆ ಫಾದರ್ ಸ್ಟೆಫೆನ್ ಜೋಸೆಫ್ ಪೀಠದ ಮುಂದೆ ಮೊದಲೇ ನಿಗದಿಯಾಗಿದ್ದ ಹನ್ನೆರಡು ಹಿರಿಯ ಶಿಷ್ಯರ ಪಾದವನ್ನು ತೊಳೆದು ಪಾದಕ್ಕೆ ಮುತ್ತಿಕ್ಕಿ ಅವರಿಗೆ ಫಲ ಭೋಜನವನ್ನು ನೀಡುವ ಮುಖಾಂತರ ಜಗತ್ತಿಗೆ ಯೇಸುವು ಶಿಷ್ಯರಿಗೆ ಕೊಡುವ ಗೌರವ ಆದರಗಳನ್ನು ಸಾರಿ ಹೇಳಿದರು.

ಜಗತ್ತನ್ನು ಪ್ರೀತಿಯಿಂದ ಮಾತ್ರವೇ ಗೆಲ್ಲಲು ಸಾಧ್ಯವೆಂದು ಹೇಳಿದ ಮಾತನ್ನು ಭಕ್ತರಿಗೆ ಮನವರಿಕೆ ಮಾಡಿದರು. ಭಕ್ತರು ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗದೆ ತಮ್ಮ ದೇಶದ ಸಂಸ್ಕೃತಿಯನ್ನು ಗೌರವಿಸುವಂತೆ ಹಿತವಚನವನ್ನಾಡಿದರು. ಪೂಜೆಯಲ್ಲಿ ದೇವಾಲಯದ ಪ್ರಮುಖರಾದ ಡೆನ್ನಿ ಬರೋಸ್, ಪ್ಯಾಟ್ರಿಕ್ ಲೋಬೊ, ಸಜಿತ್ ಜಾಕೋಬ್, ಥಾಮಸ್, ಲೂಯಿಸ್, ರೇಮಂಡ್ ಸರವೋ ಮುಂತಾದ ಪ್ರಮುಖರು ಹಾಜರಿದ್ದರು.

ಶ್ರೀ ಪಡುವೇರಿ ದಬ್ಬೆಚ್ಚಮ್ಮ ಉತ್ಸವ

ಪೊನ್ನಂಪೇಟೆ: ಪೊನ್ನಂಪೇಟೆ ಸಮೀಪದ ಈಚೂರು ಗ್ರಾಮದಲ್ಲಿರುವ ಶ್ರೀ ಪಡುವೇರಿ ದಬ್ಬೆಚ್ಚಮ್ಮ ದೇವರ ವಾರ್ಷಿಕ ಉತ್ಸವ ತಾ. 24 ರಿಂದ ಪ್ರಾರಂಭಗೊಂಡಿದ್ದು, ಏಪ್ರಿಲ್ 2 ರಂದು ನೆರಪು, ಏ. 3 ರಂದು ದೇವರ ಜಳಕ ಹಾಗೂ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.