ಸೋಮವಾರಪೇಟೆ,ಮಾ.30: ಯೇಸುಕ್ರಿಸ್ತ ಶಿಲುಬೆಗೇರಿದ ಗುಡ್ ಫ್ರೈಡೆ ಅಂಗವಾಗಿ ಶುಕ್ರವಾರ ಕ್ರೈಸ್ತ ಸಮುದಾಯದವರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಇಲ್ಲಿನ ಜಯವೀರಮಾತೆ ದೇವಾಲಯದ ಧರ್ಮಗುರು ಎಂ.ರಾಯಪ್ಪ, ಫಾದರ್ ಟೆನ್ನಿಕುರಿಯನ್, ಸಿಸ್ಟರ್ ವಿನುತ ನೇತೃತ್ವದಲ್ಲಿ ಕ್ರೈಸ್ತ ಬಾಂಧವರು ಜೇಸಿ ವೇದಿಕೆಯಲ್ಲಿ ಪ್ರಾರ್ಥನೆ ಸಲ್ಲಿಸಿ, ಮೆರವಣಿಯ ಮೂಲಕ ಚರ್ಚ್‍ಗೆ ತೆರಳಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಡಿಕೇರಿ : ಜಿಲ್ಲಾ ಕೇಂದ್ರ ಮಡಿಕೇರಿಯ ಸಂತ ಮೈಕಲರ ಚರ್ಚ್‍ನಲ್ಲಿ ಗುಡ್‍ಪ್ರೈಡೆ ಸಲುವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಶಿಲುಬೆಯ ಹಾದಿ ಕಾರ್ಯಕ್ರಮ ದೊಂದಿಗೆ (ಮೊದಲ ಪುಟದಿಂದ) ಏಸುವಿನ ಪ್ರಾರ್ಥನೆ, ಬಲಿಪೂಜೆ ನೆರವೇರಿಸಲಾಯಿತು. ಚರ್ಚ್ ಧರ್ಮಗುರು ರೆ. ಜಾನ್ ಅಲ್ಬರ್ಟ್ ಮೆಂಡೋನ್ಸ ಹಾಗೂ ಸಹಾಯಕ ರೋಹನ್ ನೇತೃತ್ವದಲ್ಲಿ ಪ್ರಾರ್ಥನೆ ನಡೆಸಲಾಯಿತು. ಕ್ರೈಸ್ತ ಸಮಾಜ ಬಾಂಧವರು, ಚರ್ಚ್ ಪದಾಧಿಕಾರಿಗಳು ಭಾಗವಹಿಸಿದ್ದರು.

ಇಂದು ವಿಶೇಷ ಪ್ರಾರ್ಥನೆ: ತಾ. 31 ರಂದು (ಇಂದು) ಈ ಪ್ರಯುಕ್ತ ರಾತ್ರಿ 10.30 ರಿಂದ ಸಂತ ಮೈಕಲರ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ, ಧಾರ್ಮಿಕ ಸಮಾರಂಭ ಏಸುವಿನ ಪುನರ್ಜನ್ಮ ದರ್ಶನ ಕಾರ್ಯಕ್ರಮಗಳು ಮಧ್ಯರಾತ್ರಿ ಸುಮಾರು 1 ಗಂಟೆಯ ತನಕ ಜರುಗಲಿದೆ ಎಂದು ಪ್ರಮುಖರು ತಿಳಿಸಿದ್ದಾರೆ.

ಶನಿವಾರಸಂತೆ :ಸಮೀಪದ ಗೋಪಾಲಪುರ ಗ್ರಾಮದ ಸಂತ ಅಂಥೋಣಿ ಚರ್ಚ್‍ನಲ್ಲಿ ಶುಕ್ರವಾರ ಕ್ರೈಸ್ತ ಸಮುದಾಯದವರು ‘ಶುಭ ಶುಕ್ರವಾರ’ ದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಶುಕ್ರವಾರ ಏಸುಕ್ರಿಸ್ತನ ಮರಣದ ದಿನವಾಗಿದ್ದು, 40 ದಿನಗಳಿಂದ ಉಪವಾಸ, ಪ್ರಾರ್ಥನೆಯಲ್ಲಿ ಕಠಿಣವಾಗಿ ಕಳೆದ ಕ್ರೈಸ್ತರು ಈ ದಿನವನ್ನು ಶೋಕ, ದುಃಖದ ದಿನವನ್ನಾಗಿ ಆಚರಿಸಿದರು. ಬೆಳಿಗ್ಗೆ ಚರ್ಚಿನ ಸಭಾಂಗಣದಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಧ್ಯಾಹ್ನ 2 ಗಂಟೆಯ ಬಳಿಕ ಕ್ರೈಸ್ತ ಸಮುದಾಯದವರು ಕೈಯಲ್ಲಿ ಶಿಲುಬೆ ಹಿಡಿದು 14 ಭಾಗಗಳಾಗಿ ವಿಂಗಡಿಸಿದ ಬೆಟ್ಟದ ಶಿಲುಬೆ ಹಾದಿಯಲ್ಲಿ ಸಾಗಿದರು. ಬೆಟ್ಟದ ತುದಿಯಲ್ಲಿ ಸೇರಿ ಎಲ್ಲರು ಮಂಡಿಯೂರಿ ಕುಳಿತು ಏಸುವಿನ ಕೊನೆಯ ದಿನ ನಡೆದ ಘಟನೆಯನ್ನು ಮೆಲುಕು ಹಾಕಿದರು. ಅಲ್ಲಿಯೂ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶಿಲುಬೆಗೆ ಮುತ್ತಿಟ್ಟರು.

ಪ್ರಾರ್ಥನೆಯ ಬಳಿಕ ಚರ್ಚಿಗೆ ಹಿಂದಿರುಗಿ ಬಂದು ಉಪವಾಸವಿದ್ದ ಕಾರಣ ಎಲ್ಲರಿಗೂ ನಿಂಬೆರಸ, ಮಜ್ಜಿಗೆ ವಿತರಿಸಲಾಯಿತು.

ಆಚರಣೆಯ ನೇತೃತ್ವವನ್ನು ಚರ್ಚಿನ ಫಾದರ್ ಡೇವಿಡ್ ಸಗಾಯ್ ರಾಜ್ ವಹಿಸಿದ್ದರು. ಡಾ. ಮೈಕಲ್ ನರೋನ್ಹಾ ಹಾಜರಿದ್ದರು. ಗೋಪಾಲಪುರ, ಒಡೆಯನಪುರ, ಮಾದೇಗೋಡು, ಬೀಟಿಕಟ್ಟೆ, ಶನಿವಾರಸಂತೆ, ಕೊಡ್ಲಿಪೇಟೆ, ಗುಡುಗಳಲೆ ಮತ್ತಿತರ ಗ್ರಾಮಗಳಿಂದ ನೂರಾರು ಮಂದಿ ಕ್ರೈಸ್ತ ಸಮುದಾಯದವರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.