ಮಡಿಕೇರಿ, ಮಾ. 30: ‘ಬೇವು-ಬೆಲ್ಲದ ಸಿಹಿ-ಕಹಿ, ಕೊಡಗಿನ ಸೊಬಗು..., ರೈತರ ಬವಣೆ..., ಪರಿಸರ ನಾಶ..., ವಿಧವೆಯ ಭವಣೆ.., ವರ್ತಮಾನದ ತಲ್ಲಣಗಳು..., ಕಾವೇರಿಯ ಕಣ್ಣೀರು..., ಭ್ರಷ್ಟಾಚಾರ..., ಸ್ನೇಹದ ಪರಿ..., ಹೆಣ್ಣಿನ ವೇದನೆ..., ಬ್ಲೂವೇಲ್ನ ಕ್ರೂರಿಯಾಟ..., ಬಾಲ್ಯದ ನೆನಪುಗಳು ಹನಿಹನಿಯಾಗಿ ತೇಲಿ ಬಂದವು..., ಕವಿ ಮನಸಿನೊಳಗಿದ್ದ ಭಾವನಾ ಲಹರಿಗಳು ರಾಜರ ಉದ್ಯಾನದಲ್ಲಿ ಹರಿದಾಡಿದವು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೊಡಗು ಪ್ರೆಸ್ಕ್ಲಬ್ ಸಹಯೋಗದೊಂದಿಗೆ ಇಲ್ಲಿನ ರಾಜಾಸೀಟ್ ಉದ್ಯಾನವನದಲ್ಲಿ ಏರ್ಪಡಿಸಲಾಗಿದ್ದ ಯುಗಾದಿ ಕವಿಗೋಷ್ಠಿಯಲ್ಲಿ ಕವಿ ಮನಸುಗಳ ಭಾವನೆಗಳು ಹೊರ ಹೊಮ್ಮಿದವು. ನಿಸರ್ಗದ ಮಡಿಲಲ್ಲಿ ನಡೆದ ಗೋಷ್ಠಿಯಲ್ಲಿ 48 ಮಂದಿ ಕವಿ-ಕವಯತ್ರಿಯರು ಪಾಲ್ಗೊಂಡು ವಾಚಿಸಿದ ಕವನಗಳು ನೆರೆದಿದ್ದ ಕವಿ ಮನಸುಗಳಿಗೆ ಮುದ ನೀಡಿದವು. ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧೆಯರಾದಿಯಾಗಿ ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು. ವಿಶೇಷವೆಂದರೆ ಈ ಬಾರಿ ಕವನಗಳನ್ನು ಕಳುಹಿಸಿದ ಎಲ್ಲ ಕವಿಗಳಿಗೂ ಅವಕಾಶ ಕಲ್ಪಿಸಲಾಗಿತ್ತು. ಈ ಪೈಕಿ ಕೆಲವರು ಮಾತ್ರ ಗೈರು ಹಾಜರಾಗಿದ್ದರು.
ಸ್ವಂತಿಕೆ ತತ್ವವಾಗಲಿ
ಕವನ ರಚನೆ ಸುಲಭದ ಮಾತಲ್ಲ; ಕೇವಲ ಓದಿನಿಂದ ಕವಿತೆ, ಸಾಹಿತ್ಯ ಹುಟ್ಟುವದಿಲ್ಲ. ಬದುಕಿನ ಅನುಭವ ಹೊಂದಿಕೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳಬೇಕು. ಕ್ಷಣಿಕ ಗೌರವಕ್ಕಾಗಿ ಕೃತಿಚೌರ್ಯದಂತಹ ಕೆಲಸಕ್ಕೆ ಕೈ ಹಾಕಬಾರದು. ಜೀವನ್ಮುಖಿಯ, ಲವಲವಿಕೆಯ ಉದ್ದೀಪನಗೊಳಿಸುವ ಸಾಹಿತ್ಯವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ಅಂತರಂಗದ ತೃಪ್ತಿ ಭಾವನೆಗಳ ಮೂಲಕ ಜಗತ್ತನ್ನು ಮುಟ್ಟಬೇಕು. ಕವಿಗಳಿಗೆ ಸ್ವಂತಿಕೆ ತತ್ವವಾಗಬೇಕೆಂದು ಕವಿಗೋಷ್ಠಿಯನ್ನು ಕವನ ವಾಚನ ಮಾಡುವ ಮೂಲಕ ಉದ್ಘಾಟಿಸಿದ ಕವಯತ್ರಿ
(ಮೊದಲ ಪುಟದಿಂದ) ಬಿ.ಎಸ್.ಎನ್.ಎಲ್. ಉಪ ಮಂಡಳಾಧಿಕಾರಿ ಕೊಟ್ಟಕೇರಿಯನ ಲೀಲಾ ದಯಾನಂದ ಹೇಳಿದರು.
ರಾಜಸೀಟ್ನಲ್ಲಿ ಕವಿಗೋಷ್ಠಿ ಏರ್ಪಡಿಸಿರುವದು ವಸಂತರಾಜನ ಮದುವೆಗೆ ಸೊಬಾನೆ ಹಾಡಿದಂತಿದೆ ಎಂದು ವಿಶ್ಲೇಷಿಸಿದ ಅವರು ಇಂತಹ ಪರಿಸರ ಕವಿಗಳಿಗೆ ಸ್ಪೂರ್ತಿಯ ಸೆಲೆಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಮಂಡೇಪಂಡ ಗೀತಾ ಮಂದಣ್ಣ ಅವರು ಕವನ ರಚನೆಗೆ ನಿರ್ದಿಷ್ಟ ವಿಷಯ ಬೇಕಾಗಿಲ್ಲ. ಬರೆಯುವ ಕವನವು ಓದುಗರ ಮನಸಿಗೆ ಮುಟ್ಟಬೇಕೆಂದರು. ಕವಿಗೋಷ್ಠಿ ವಾಚಿಸಲ್ಪಟ್ಟ ಕವನಗಳೆಲ್ಲವೂ ಪ್ರಬುದ್ಧವಾಗಿದ್ದು, ರಸಸ್ವಾರ ನೀಡಿದೆ. ಕವಿಗಳು ಕವನ ರಚನೆ ಮಾಡುವದನ್ನು ನಿಲ್ಲಿಸಬಾರದು ನಿರಂತರವಾಗಿರಬೇಕು. ಕೃತಿಚೌರ್ಯ ಕೆಟ್ಟದು ಅಕ್ಷರ ಸರಸ್ವತಿಯಾಗಿದ್ದು, ಕೃತಿಚೌರ್ಯ ಸರಸ್ವತಿಯನ್ನು ಕದ್ದಂತೆ ಸ್ವಂತ ಅಕ್ಷರ ಜೋಡಿಸಿ ಕಲಾಪ್ರಪಂಚಕ್ಕೆ ಕುಂಚವಾಗಬೇಕು. ಯಾವದೇ ವಿಚಾರ ಮನಸಿಗೆ ಬಂದ ಕೂಡಲೇ ಬರೆದಿಟ್ಟುಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಅತಿಥಿಯಾಗಿದ್ದ ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ಕವನ ರಚನೆ ಎಲ್ಲರಿಂದಲೂ ಸಾಧ್ಯವಿಲ್ಲ. ಅದು ಕಷ್ಟದ ಕೆಲಸವಾಗಿದ್ದರೂ, ಇಷ್ಟವಾಗುತ್ತದೆ. ಓದುವ ಹವ್ಯಾಸದೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಬೇಕೆಂದರು. ಸಾಹಿತ್ಯಾಸಕ್ತರಿಗಾಗಿ ಕ.ಸಾ.ಪ. ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಎಲ್ಲರೂ ಕೈಜೋಡಿಸುವಂತೆ ಕೋರಿದರು.
ಕ.ಸಾ.ಪ. ಮಾಜಿ ಅಧ್ಯಕ್ಷ ಎಸ್.ಐ. ಮುನೀರ್ ಅಹ್ಮದ್ ಮಾತನಾಡಿ, ಇದೊಂದು ಅದ್ಭುತ ಚಿಂತನೆಯ ಕವಿಗೋಷ್ಠಿಯಾಗಿದೆ. ಹೊಟ್ಟೆಪಾಡಿಗಾಗಿ ಬಹಳಷ್ಟು ಕನ್ನಡ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ನಾಡು, ನುಡಿ ರಕ್ಷಣೆಗಾಗಿ 6 ಕೋಟಿ ಕನ್ನಡಿಗರ ಧ್ವನಿಯಾಗಿ ನೂರು ವರ್ಷಗಳಿಂದ ಸೇವೆಗೈಯ್ಯುತ್ತಿರುವ ಏಕೈಕ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಹಲವಾರು ಸೃಜನಶೀಲ ಸೃಜನೇತರ ಕೃತಿಗಳನ್ನು ಹೊರತಂದು ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದೆ ಎಂದು ಹೇಳಿದರು. ಓದಿದರೆ ಜ್ಞಾನ ಬೆಳೆಯುತ್ತದೆ. ಮನೆಯಲ್ಲಿ ಮಾತೆಯರು ಮಕ್ಕಳಿಗೆ ಸಂಸ್ಕಾರ ಕಲಿಸಿಕೊಟ್ಟರೆ ಸುಸಂಸ್ಕøತಿ ಬೆಳೆಯುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಜಿಲ್ಲೆಯಲ್ಲಿ ಸಾಹಿತ್ಯದ ಬೆಳವಣಿಗೆಯೊಂದಿಗೆ ಸಾಹಿತ್ಯಾಸಕ್ತರು ಹೆಚ್ಚಾಗಬೇಕೆಂಬ ಉದ್ದೇಶದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇಂದಿನ ಕವಿಗೋಷ್ಠಿಯಲ್ಲಿ ಯಾರೂ ವಂಚಿತರಾಗಬಾರದೆಂಬ ಉದ್ದೇಶದಿಂದ ಎಲ್ಲರಿಗೂ ಅವಕಾಶ ನೀಡಲಾಗಿದೆ. ಎಲ್ಲರೂ ಪುಸ್ತಕ ಓದಬೇಕು ಆ ಮೂಲಕ ಮಸ್ತಕಕ್ಕೆ ಮಣಿಕಂಠನಾಗಬೇಕು. ಪುಸ್ತಕಗಳನ್ನು ಕೊಂಡು ಓದುವಂತೆ ಸಲಹೆಯಿತ್ತರು.
ಆಶಯ ನುಡಿಗಳನ್ನಾಡಿದ ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು, ಸಾಹಿತ್ಯ ಒಂದು ಕಾಲಘಟ್ಟದ ಬದುಕಿನ ಚಿತ್ರಣವನ್ನು ತೆರೆದಿಡುತ್ತದೆ. ಆ ಮೂಲಕ ಸಾಹಿತಿಗಳು ಬರಹಗಾರರು ಶಾಶ್ವತವಾಗಿ ಉಳಿಯುತ್ತಾರೆ ಎಂದರು. ಉದಯೋನ್ಮುಖ ಬರಹಗಾರರು ತಮ್ಮ ಬರಹಗಳನ್ನು ನಿರಂತರವಾಗಿರಿಸಿ ಸಂಕಲನ, ಪುಸ್ತಕಗಳನ್ನು ಹೊರತರಬೇಕು.
ಪತ್ರಕರ್ತರು ಹೊರತರುವ ಪುಸ್ತಕಗಳನ್ನು ಪ್ರಕಟಣೆಗೆ ಪ್ರಾಯೋಜಕರನ್ನು ಒದಗಿಸಿಕೊಡುವ ನಿಟ್ಟನಲ್ಲಿ ಪ್ರೋತ್ಸಾಹ ನೀಡುವದಾಗಿ ಹೇಳಿದರು. ಬರಹಗಳು ಜನರ ಮನಸಿಗೆ ಮುಟ್ಟುವಂತಾಗಬೇಕೆಂದರು.
ಹಿರಿಯ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಪ್ರೆಸ್ಕ್ಲಬ್ ಖಜಾಂಚಿ ರೆಜಿತ್ ಕುಮಾರ್, ವಿಕ್ರಂ ಡೆಕೋರೇಟರ್ಸ್ನ ಪಿ.ಜಿ. ಸುಕುಮಾರ್ ಶುಭ ಹಾರೈಸಿದರು. ಸೋಮವಾರಪೇಟೆ ತಾಲೂಕು ಕ.ಸಾ.ಪ. ಕಾರ್ಯದರ್ಶಿ ಎಂ.ಎಲ್. ಪ್ರೇಮಾ ಹಾಗೂ ತಂಡದವರು ನಾಡಗೀತೆ ಹಾಡಿದರೆ, ಮಡಿಕೇರಿ ತಾಲೂಕು ಕ.ಸಾ.ಪ. ನಿರ್ದೇಶಕ ಬಿ.ಎಸ್. ಜಯಪ್ಪ ನಿರೂಪಿಸಿ, ವಂದಿಸಿದರು.