ಕುಶಾಲನಗರ, ಮಾ. 30: ಗ್ರಾಮೀಣ ಭಾಗದ ಫುಟ್ಬಾಲ್ ಕ್ರೀಡಾಪಟುಗಳ ಪ್ರತಿಭೆಗಳಿಗೆ ಉತ್ತಮ ಭವಿಷ್ಯ ರೂಪಿಸುವ ಕಾರ್ಯವನ್ನು ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಹಮ್ಮಿಕೊಂಡಿದೆ ಎಂದು ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ತಿಳಿಸಿದ್ದಾರೆ. ಅವರು ಕುಶಾಲನಗರ ಸಮೀಪ ಗುಡ್ಡೆಹೊಸೂರು ಐಎನ್‍ಎಸ್ ಸ್ಪೋಟ್ರ್ಸ್ ಸೆಂಟರ್ ಆಶ್ರಯದಲ್ಲಿ ಒಂದು ವಾರ ಕಾಲ ನಡೆಯಲಿರುವ ಫುಟ್ಬಾಲ್ ಲೀಗ್ ಟೂರ್ನಮೆಂಟ್ ಚಾಲನೆ ನೀಡಿ ಮಾತನಾಡಿದರು.
ಅಸೋಸಿಯೇಷನ್ ಮೂಲಕ ಅಧಿಕೃತ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವ ತಂಡಗಳ ಸದಸ್ಯರುಗಳನ್ನು ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡುವ ಉದ್ದೇಶದೊಂದಿಗೆ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರಾಯೋಜಕತ್ವ ದೊರೆತಲ್ಲಿ ಜಿಲ್ಲೆಯ ವಿವಿಧೆಡೆ ಫುಟ್ಬಾಲ್ ಪಂದ್ಯಾವಳಿ ಆಯೋಜಿಸುವ ಮೂಲಕ ಯುವ ಪೀಳಿಗೆಗೆ ಪ್ರೋತ್ಸಾಹ ಕಲ್ಪಿಸುವ ಚಿಂತನೆ ಹೊಂದಲಾಗಿದೆ ಎಂದರು.
ಪಂದ್ಯಾಟದ ಪ್ರಾಯೋಜಕರಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹಿರಿಯ ಅಧಿಕಾರಿ ವೈಭವ್ ಮಾತನಾಡಿ, ಇದೇ ಪ್ರಥಮ ಬಾರಿಗೆ ತಮ್ಮ ಸಂಸ್ಥೆ ಕೊಡಗು ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡಾಕೂಟದ ಪ್ರಾಯೋಜಕತ್ವ ನೀಡಿದೆ. ಇದರ ಸದುಪಯೋಗವಾಗಬೇಕೆಂದು ಕರೆ ನೀಡಿದರು.
ಐಎನ್‍ಎಸ್ ಕ್ರೀಡಾ ಸಂಸ್ಥೆಯ ಸ್ಥಾಪಕ ಐಚೆಟ್ಟಿರ ಸೋಮಯ್ಯ ಮಾತನಾಡಿ, ಕ್ರೀಡಾಪಟುಗಳಿಗೆ ಸಂಸ್ಥೆಯ ಮೂಲಕ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗುವದು ಎಂದರಲ್ಲದೆ ರಾಜ್ಯದಲ್ಲಿಯೇ ಉತ್ತಮ ನೈಸರ್ಗಿಕ ಟರ್ಫ್ ಹೊಂದಿರುವ ಕೇಂದ್ರ ಇದಾಗಿದೆ ಎಂದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೊಡಗು ಜಿಲ್ಲಾ ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಅಸೋಸಿಯೇಷನ್ ರಾಜ್ಯ ಪ್ರತಿನಿಧಿ ಜಗದೀಶ್ ಅವರುಗಳು ಮಾತನಾಡಿ, ಪಂದ್ಯಾಟಗಳಿಗೆ ಶುಭ ಕೋರಿದರು. ಲೀಗ್ ಪಂದ್ಯಾವಳಿಯಲ್ಲಿ ಜಿಲ್ಲೆಯ 18 ತಂಡಗಳು ಪಾಲ್ಗೊಂಡಿದ್ದು ಏ.8 ರಂದು ಫೈನಲ್ ಪಂದ್ಯಾಟ ನಡೆಯಲಿದೆ.
ಮುಕ್ತ ವಾಲಿಬಾಲ್ ಪಂದ್ಯಾಟ
ಗುಡ್ಡೆಹೊಸೂರು: ಇಲ್ಲಿನ ಶಾಲಾ ಆವರಣದಲ್ಲಿ ಅಲ್ಲಿನ ಹಿತರಕ್ಷಣಾ ಯುತ್ ಕ್ಲಬ್ ವತಿಯಿಂದ ನಡೆಯುತ್ತಿರುವ ಮುಕ್ತ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮವನ್ನು ಶ್ರೀ ಬಸವೇಶ್ವರ ಮತ್ತು ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಕ್ರೀಡಾಜ್ಯೋತಿಯನ್ನು ರಾಷ್ಟ್ರೀಯ ಹಾಕಿಪಟು ಕು.ಸಂಧ್ಯಾ ಶಾಲಾ ಆವರಣಕ್ಕೆ ತಂದರು. ನಂತರ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಗಮ್ ಶಾಲೆಯ ಸಂಸ್ಥಾಪಕಿ ಪ್ರೇಮ ಅಚ್ಚಯ್ಯ, ಗ್ರಾಮ.ಪಂ.ಅಧ್ಯಕ್ಷೆ ಭಾರತಿ ಮತ್ತು ಹಿತರಕ್ಷಣಾ ಯೂತ್‍ಕ್ಲಬ್ ನ ಅಧ್ಯಕ್ಷ ಶಶಿಕುಮಾರ್, ಹಾಜರಿದ್ದರು, ಅಲ್ಲದೆ ಸ್ಥಳೀಯರಾದ ಎಂ.ಆರ್.ಉತ್ತಪ್ಪ ಪ್ರವೀಣ್, ಬಿ.ಟಿ.ಪ್ರಸನ್ನ, ವಾಲಿಬಾಲ್ ಕ್ರೀಡಾಪಟು ಸತ್ಯ, ರವಿ, ಪ್ರದಿ ಮುಂತಾದವರು ಹಾಜರಿದ್ದರು. ಗುರುಬಸಪ್ಪ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಸರ್ವರನ್ನು ಸ್ವಾಗತಿಸಿ, ಕುಡೆಕ್ಕಲ್ ಗಣೇಶ್ ವಂದಿಸಿದರು. ನಂತರ ಕ್ಲಬ್‍ನ ಸದಸ್ಯರ ನಡುವೆ ವಾಲಿಬಾಲ್ ಮತ್ತು ಥ್ರೋಬಾಲ್ ಪ್ರದರ್ಶನ ಪಂದ್ಯ ನಡೆಯಿತು. ಥ್ರೋಬಾಲ್ ಪಂದ್ಯಾಟವನ್ನು ಪ್ರೇಮಾಅಚ್ಚಯ್ಯ, ಕು.ಸಂಧ್ಯಾ, ಭಾರತಿ ಮುಂತಾದವರು ಸೇರಿ ಉಧ್ಘಾಟಿಸಿದರು. ವಾಲಿಬಾಲ್ ಪಂದ್ಯಾಟವನ್ನು ವಾಲಿಬಾಲ್ ಕ್ರೀಡಾಪಟು ಸತ್ಯ ಮತ್ತು ಮಾಜಿ ಸೈನಿಕ ಕೋಡಿ ಜಯಣ್ಣ, ಕ್ಲಬ್‍ನ ಅಧ್ಯಕ್ಷ ಶಶಿಕುಮಾರ್, ಅರುಣ್ ಅಭಿ ಮುಂತಾದವರು ಪ್ರಾರಂಭಿಸಿದರು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಮಾತನಾಡಿ ಕ್ರೀಡಾಕೂಟಕ್ಕೆ ಶುಭ ಕೋರಿದರು. ಹಿತರಕ್ಷಣಾ ಯೂತ್‍ಕ್ಲಬ್‍ನ ಸದಸ್ಯರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
-ಗಣೇಶ್ ಕುಡೆಕ್ಕಲ್