ಸೋಮವಾರಪೇಟೆ, ಮಾ.30 : ಇಲ್ಲಿಗೆ ಸಮೀಪದ ಕೆಂಚಮ್ಮನ ಬಾಣೆಯಲ್ಲಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ್ದ ಹೊರ ಜಿಲ್ಲೆಗಳ ಆಟಗಾರರು, ಕಬಡ್ಡಿ ಪ್ರೇಮಿಗಳನ್ನು ರಂಜಿಸಿದರು.
ಅತ್ಯುತ್ತಮ ಧಾಳಿ, ಹಿಡಿತ, ನೆಗೆತಗಳ ಮೂಲಕ ಕ್ರೀಡಾಪ್ರೇಮಿ ಗಳನ್ನು ಆಕರ್ಷಿಸಿದ ಆಟಗಾರರು, ಭರ್ಜರಿ ಚಪ್ಪಾಳೆ, ಪ್ರೋತ್ಸಾಹ ಗಿಟ್ಟಿಸಿದರು. ಸಂಘಟನಾತ್ಮಕ ಆಟ ಪ್ರದರ್ಶಿಸಿದ ಚನ್ನರಾಯಪಟ್ಟಣದ ಆಟಗಾರರನ್ನು ಒಳಗೊಂಡ ವಸಂತಪೂಜಾರಿ ತಂಡ ಪ್ರಥಮ ಸ್ಥಾನ ಪಡೆದರೆ, ಬೆಂಗಳೂರಿನ ಆಟಗಾರರನ್ನು ಒಳಗೊಂಡ ಮಂಜೂರು ತಮ್ಮಣ್ಣಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.
ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ ಆಕರ್ಷಕ ಟ್ರೋಫಿಯೊಂದಿಗೆ ರೂ. 30ಸಾವಿರ ನಗದು, ದ್ವಿತೀಯ ಬಹುಮಾನವಾಗಿ ಆಕರ್ಷಕ ಟ್ರೋಫಿ ಹಾಗೂ ರೂ. 15 ಸಾವಿರ ನಗದು ನೀಡಲಾಯಿತು. ಸೆಮಿಫೈನಲ್‍ನಲ್ಲಿ ಕುಶಾಲನಗರದ ಹೊಟೇಲ್‍ಮಿನಿಸ್ಟರ್ ಕೋಟ್ರ್ಸ್ ಹಾಗೂ ಬಿಎಂಎಸ್‍ಎಸ್ ‘ಬಿ’ ತಂಡಗಳು ಸೋಲು ಕಾಣುವದ ರೊಂದಿಗೆ ತೃತೀಯ ಬಹುಮಾನವಾಗಿ ತಲಾ ರೂ. 3,500 ನಗದು ಹಾಗೂ ಟ್ರೋಫಿ ಪಡೆದವು.
17 ವರ್ಷದೊಳಗಿನ ವಿದ್ಯಾರ್ಥಿ ಗಳಿಗಾಗಿ ಆಯೋಜಿಸಿದ್ದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ತೋಳೂರು ಶೆಟ್ಟಳ್ಳಿಯ ಮೊಗೇರ ಕ್ಷೇಮಾಭಿವೃದ್ಧಿ ಸಂಘದ ತಂಡ ಪ್ರಥಮ, ಕೋವರ್‍ಕೊಲ್ಲಿಯ ಸೆವೆನ್ ವಾರಿಯರ್ಸ್ ತಂಡ ದ್ವಿತೀಯ ಸ್ಥಾನ ಪಡೆದವು. ಪಂದ್ಯಾಟದ ತೀರ್ಪುಗಾರರಾಗಿ ಅಮೇಚೂರ್ ಕಬಡ್ಡಿ ಅಸೋಸಿಯೇಷನ್‍ನ ಎ.ಎಂ. ಆನಂದ್, ಗೌಡಳ್ಳಿಯ ಪ್ರವೀಣ್, ಬೇಳೂರಿನ ಎಚ್.ಬಿ. ಕೃಷ್ಣಪ್ಪ, ಹಂಡ್ಲಿಯ ಕೃಷ್ಣಪ್ಪ, ಕೂಡ್ಲೂರಿನ ಚೇತನ್ ಹಾಗೂ ಕುಸುಬೂರಿನ ಉಲ್ಲಾಸ್ ಕಾರ್ಯ ನಿರ್ವಹಿಸಿದರು.
ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಯುವಕ ಸಂಘದ ಕ್ರೀಡಾಧ್ಯಕ್ಷ ಕೆ.ಕೆ. ನಂದಕುಮಾರ್ ನೇತೃತ್ವದಲ್ಲಿ ಸಂಘದ ಅಧ್ಯಕ್ಷ ಕೆ.ಎ. ದಿನೇಶ್, ಕಾರ್ಯದರ್ಶಿ ಎಂ.ಎನ್. ಸದಾನಂದ, ಉಪಾಧ್ಯಕ್ಷ ಎನ್. ದಿವಾಕರ್, ಖಜಾಂಚಿ ರಾಮು, ಕ್ರೀಡಾ ಉಪಾಧ್ಯಕ್ಷ ಸುದರ್ಶನ್, ಸಲಹೆಗಾರ ಜಗದೀಶ್ ಹಾಗೂ ಸದಸ್ಯರುಗಳು ಪಂದ್ಯಾಟದ ಯಶಸ್ಸಿಗೆ ಶ್ರಮಿಸಿದರು.