ಮೂರ್ನಾಡು, ಮಾ. 30: ಹದಗೆಟ್ಟಿರುವ ರಸ್ತೆ ದುರಸ್ಥಿಗೆ ಗಮನ ಹರಿಸದೆ ರಸ್ತೆ ಬದಿಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿರುವ ಜಿಲ್ಲಾ ಪಂಚಾಯಿತಿ ವಿರುದ್ದ ಕಟ್ಟೆಮಾಡು ಗ್ರಾಮಸ್ಥರು ಇಂದು ಮೌನ ಪ್ರತಿಭಟನೆ ನಡೆಸಿದರು.ಕಟ್ಟೆಮಾಡು ಜಂಕ್ಷನ್ ಬಳಿ ಶುಕ್ರವಾರ ಬೆಳಿಗ್ಗೆ ಸುಮಾರು 50ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಬಿದ್ರುಪಣೆ, ತೋಟಂಬೈಲು, ಗುಡ್ಡೆರ, ದೇವಜನ, ಕಟ್ಟೆಮನೆ, ಪಾರೇರ ಹಾಗೂ ಪಾರೆಮಜಲು ಕುಟುಂಬಗಳಿಗೆ ಸಾಗುವ ರಸ್ತೆ ಸುಮಾರು 2.5 ಕಿ.ಮೀ. ಇದ್ದು, ಅಲ್ಪ ಸ್ವಲ್ಪ ಡಾಮರೀಕರಣಗೊಂಡಿದೆ. ಇನ್ನುಳಿದ ರಸ್ತೆಯು ಡಾಮರೀಕರಣಗೊಳ್ಳದೆ ಕಲ್ಲು ರಸ್ತೆಯಿಂದ ಕೂಡಿದ್ದು, ಸಂಪೂರ್ಣ ಗುಂಡಿಮಯಗೊಂಡಿದೆ. ಪ್ರತಿನಿತ್ಯ ಶಾಲಾ ಮಕ್ಕಳು, ಶಾಲಾ ವಾಹನಗಳು, ಪಾದಚಾರಿಗಳು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ರಸ್ತೆ ತೀರಾ ಹದಗೆಟ್ಟಿರುವದರಿಂದ ಈ ಭಾಗದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ತಾ.18 ರಂದು ಕೊಡಗು ಜಿಲ್ಲಾ ಪಂಚಾಯಿತಿಯಿಂದ ಹದಗೆಟ್ಟಿರುವ ರಸ್ತೆಯ ಬದಿಗಳಲ್ಲಿ ಸುಮಾರು 23ಕ್ಕೂ ಅಧಿಕ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಹದಗೆಟ್ಟಿರುವ ರಸ್ತೆಗೆ ಸೂಚನಾ ಫಲಕಗಳ ಅವಶ್ಯಕತೆ ಇದೆಯೇ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಈ ಕಾಮಗಾರಿಗೆ 2.5 ಲಕ್ಷ ರೂಪಾಯಿ ವೆಚ್ಚಗೊಳಿಸಿದೆ ಎನ್ನಲಾಗಿದೆ. ಸೂಚನಾ ಫಲಕಗಳನ್ನು ಅಳವಡಿಸುವ ಈ ಅನುದಾನವನ್ನು ರಸ್ತೆ ಅಭಿವೃದ್ಧಿಗೆ ವಿನಿಯೋಗಿಸಬಹುದಾಗಿತ್ತು. ಆದ್ದರಿಂದ ನಿವಾಸಿಗಳಿಗೆ ಉಪಯೋಗವಾಗುತ್ತಿತು. ಪ್ರತಿದಿನ ಬೆರಳೆಣಿಕೆಯಷ್ಟು ವಾಹನಗಳು ಈ ರಸ್ತೆಯಲ್ಲಿ ಸಂಚಾರ ನಡೆಸುತ್ತಿದ್ದು ಸೂಚನಾ ಫಲಕಗಳ ಅವಶ್ಯಕತೆ ಇಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ರುಪಣೆ ಮೋಹನ್ ಆಗಮಿಸಿ ಮಾತನಾಡಿ ಗ್ರಾಮ ಪಂಚಾಯಿತಿ ಗಮನಕ್ಕೆ ತಾರದೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಜಿಲ್ಲಾ ಪಂಚಾಯಿತಿ ಇಂಜಿನಿಯರು ಅವರಿಗೆ ಮಾಹಿತಿ ನೀಡುವಂತೆ ಗ್ರಾಮ ಪಂಚಾಯಿತಿಯಿಂದ ತಿಳಿಸಲಾಗಿದೆ ಆದರೆ ಇದುವರೆಗೂ ಯಾವದೇ ಮಾಹಿತಿ ನೀಡಲಿಲ್ಲ ಎಂದು ತಿಳಿಸಿ ಮುಂದೆ ಸೂಚನಾ ಫಲಕ ಅಳವಡಿಕೆ ಕಾಮಗಾರಿ ಕುರಿತು ಜಿಲ್ಲಾಡಳಿತ ಕಚೇರಿ ಮುಂದೆ ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಸಿದರು.
ಚುನಾವಣೆ ಬಹಿಷ್ಕಾರ : ಒಂದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಏಪ್ರಿಲ್ 30ರ ಒಳಗೆ ರಸ್ತೆ ದುರಸ್ಥಿ ನಡೆಸಬೇಕಾಗಿದೆ. ಇಲ್ಲದಿದ್ದಲ್ಲಿ ವಿಧಾನಸಭೆ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರಿಸಲಾಗಿದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಗಾಮಸ್ಥರಾದ ವಿಶ್ವನಾಥ್, ಪೊನ್ನಪ್ಪ, ಬಸಪ್ಪ, ಪ್ರದೀಪ್, ಉಲ್ಲಾಸ, ಧನುಕುಮಾರ್, ಗಿರೀಶ್, ಮೊಟ್ಟಯ್ಯ, ಮೋಹನ್ ಕುಮಾರ್, ಕೇಶವ ಇನ್ನಿತರರು ಪಾಲ್ಗೊಂಡಿದ್ದರು.