ವೀರಾಜಪೇಟೆ, ಮಾ. 30: ತಾನೋರ್ವ ಉನ್ನತ ಮಟ್ಟದ ಸರಕಾರಿ ಅಧಿಕಾರಿ ಎಂದು ಹೇಳಿ ಕೊಂಡು ಬೆಂಗಳೂರು, ಮೈಸೂರು ಹಾಗೂ ಇತರೆ ಡೆಗಳಲ್ಲಿ ವಂಚಿಸಿದಲ್ಲದೆ, ಕೊಡಗು ಜಿಲ್ಲೆಯಲ್ಲಿ ತನ್ನ ಚಾಳಿ ಮುಂದುವರಿಸಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಮೊಕದ್ದಮೆ ದಾಖಲಿಸಲಾಗಿದೆ. ಈ ನಕಲಿ ಅಧಿಕಾರಿಯು ಮೂಲತಃ ಒಡಿಸ್ಸಾ ರಾಜ್ಯ ಪುರಿ ಜಿಲ್ಲೆಯ ಸುಕಿಗೋಪಲ್ ತಾಲೂಕಿನ ಬೀರಾರಾಂ ಚಂದ್ರಪುರ್ ಗ್ರಾಮ ನಿವಾಸಿ ಸೌಮ್ಯ ರಂಜನ್ ಮಿಶ್ರ (32) ಎಂಬಾತನೆಂದು ತನಿಖೆಯಿಂದ ಗೊತ್ತಾಗಿದೆ.ಆರೋಪಿಯು ತಾನು ಮುಂಬೈನ ಪ್ರಾದೇಶಿಕ ಕಂದಾಯ ಆಯುಕ್ತ ಎಂದು ಪರಿಚಯಿಸಿಕೊಂಡು ಎರಡು ದಿನಗಳ ಹಿಂದೆಯೇ ಮೈಸೂರಿನ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಗೆ ಕರೆ ಮಾಡಿ ಕೊಡಗಿಗೆ ಸರಕಾರಿ ಕೆಲಸದ ನಿಮಿತ್ತ ತೆರಳಲು ವಾಹನದ ಬೇಡಿಕೆ ಇರಿಸಿರುವದಾಗಿ ಅಲ್ಲದೆ ಪೊಲೀಸ್ ರಕ್ಷಣೆ ಕೇಳಿದ್ದಾನೆ ಎಂದು ಗೊತ್ತಾಗಿದೆ.

ಆ ಮೇರೆಗೆ ಅಲ್ಲಿನ ಅಧಿಕಾರಿಗಳು ಈ ನಕಲಿ ಆಯುಕ್ತನ ಬೇಡಿಕೆಯಂತೆ ಸರಕಾರಿ ವಾಹನದೊಂದಿಗೆ ಪೊಲೀಸ್ ರಕ್ಷಣೆಯಲ್ಲಿ ತಾ. 28ರಂದು ವೀರಾಜಪೇಟೆಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರೆಸಾರ್ಟ್‍ವೊಂದಕ್ಕೆ ಕಳುಹಿಸಿಕೊಟ್ಟಿರುವದಾಗಿ ಮೂಲಗಳಿಂದ ಸುಳಿವು ಲಭಿಸಿದೆ.

ರೆಸಾರ್ಟ್‍ನಿಂದ ತಂತ್ರಗಾರಿಕೆ : ಮೂಲಗಳ ಪ್ರಕಾರ ರೆಸಾರ್ಟ್‍ಗೆ ಪತ್ನಿಯೆಂದು ಆರೋಪಿಯು ಹೇಳಿಕೊಂಡಿರುವ ಮಹಿಳೆ ಜತೆಗೆ ಈತ ತಂಗಿದ್ದಾನೆ. ಅಲ್ಲಿಂದ ಇಂಟರ್‍ನೆಟ್ ವೆಬ್‍ಸೈಟ್ ಮೂಲಕ ಕೊಡಗು ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರು, ವೀರಾಜಪೇಟೆ ಉಪವಿಭಾಗದ ಅಧಿಕಾರಿಗಳ ಸಂಪರ್ಕದ ಮೊಬೈಲ್ ಹಾಗೂ ದೂರವಾಣಿ ಸಂಖ್ಯೆಗಳನ್ನು ಕಲೆ ಹಾಕಿದ್ದಾನೆ.

ಜಿಲ್ಲಾಧಿಕಾರಿ ಕಚೇರಿಗೆ ಕರೆ : ನೇರವಾಗಿ ಕೊಡಗು ಜಿಲ್ಲಾಧಿಕಾರಿ ಕಚೇರಿಗೂ ಕರೆ ಮಾಡಿರುವ ಸೌಮ್ಯ ರಂಜನ್ ಮಿಶ್ರ ತನಗೆ ಜಿಲ್ಲೆಯಲ್ಲಿ ಸಂಚರಿಸಲು ವಾಹನ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರ ವಾಣಿಯಿಂದ ಬೇಡಿಕೆ ಇರಿಸಿದ್ದು, ಯಾವದೇ ಪೂರ್ವಾನುಮತಿಯಿಲ್ಲದ ಕಾರಣದಿಂದ ಈ ಬಗ್ಗೆ ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಿಲ್ಲ.

ಹೀಗಾಗಿ ಪೊಲೀಸ್ ಅಧೀಕ್ಷಕರ ಕಚೇರಿ ಹಾಗೂ ಇತರ ಕೆಳಹಂತದ ಅಧಿಕಾರಿಗಳನ್ನು ಸಂಪರ್ಕಿಸಿರುವ ಈ ವ್ಯಕ್ತಿ ತನ್ನ ಬೇಡಿಕೆಗಳನ್ನು ತಿಳಿಸಿದ್ದಾನೆ. ಪೊಲೀಸ್ ಇಲಾಖೆಯಿಂದಲೂ ತಕ್ಷಣ ಸ್ಪಂದನ ಲಭಿಸುವದಿಲ್ಲ; ಈ ನಡುವೆ ಮಡಿಕೇರಿ ನಗರಸಭೆ ಆಯುಕ್ತರ ಕಚೇರಿಗೆ ಈತ ಸಂಪರ್ಕಿಸಿದ್ದಾನೆ.

ಅಲ್ಲದೆ, ಸ್ವತಃ ಆಯುಕ್ತೆ ಶುಭ ಅವರ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ; ತಾನು ಜಿಲ್ಲಾಧಿಕಾರಿ ಕಚೇರಿಯಿಂದ ದೂರವಾಣಿ ಸಂಖ್ಯೆ ಪಡೆದಿದ್ದು, ಜಿಲ್ಲೆಯಲ್ಲಿ ತನ್ನ ಓಡಾಟಕ್ಕೆ ವಾಹನ ಒದಗಿಸಬೇಕೆಂದು ಬೇಡಿಕೆ ಇರಿಸಿದ್ದಾನೆ. ಈ ಬಗ್ಗೆ ಸಂಶಯಗೊಂಡ ಆಯುಕ್ತರು ಜಿಲ್ಲಾಧಿಕಾರಿ ಕಚೇರಿಯಿಂದ ಯಾವದೇ ಮಾಹಿತಿ ದೊರಕದಿರುವ ಕುರಿತು ಸಂಶಯಗೊಂಡಿದ್ದಾರೆ. ಅಲ್ಲದೆ, ನಕಲಿ ಅಧಿಕಾರಿಗೆ ಯಾವದೇ ಸಂಶಯ ಉಂಟಾಗದಂತೆ ಆತ ತಂಗಿದ್ದ ಅಂಬಟ್ಟಿಯ ಗ್ರೀನ್ಸ್ ರೆಸಾರ್ಟ್‍ಗೆ ಚಾಲಕನ ಸಹಿತ ವಾಹನವೊಂದನ್ನು ಕಳುಹಿಸಿದ್ದಾರೆ.

ಇನ್ನೊಂಡೆ ಸ್ವತಃ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅವರುಗಳು ಕರ್ತವ್ಯ ನಿರತ ಅಧಿಕಾರಿಗಳ ಮಾಹಿತಿ ಕಲೆ ಹಾಕಿದಾಗ, ನಕಲಿ ಅಧಿಕಾರಿಯ ಹೆಸರಿನಲ್ಲಿ ಯಾರೊಬ್ಬರು ಐ.ಎ.ಎಸ್. ಶ್ರೇಣಿ ಅಧಿಕಾರಿಗಳು ಇಲ್ಲದಿರುವದು ದೃಢಪಟ್ಟಿದೆ.

(ಮೊದಲ ಪುಟದಿಂದ)

ಬಲೆಗೆ ಬಿದ್ದ ವಂಚಕ : ಆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರು, ನಗರಸಭೆಯಿಂದ ಅಂಬಟ್ಟಿ ರೆಸಾರ್ಟ್‍ಗೆ ವಾಹನ ತಲಪುತ್ತಿದ್ದಂv Éಯೇ ಬಲೆ ಬೀಸಿದ್ದಾರೆ. ಡಿವೈಎಸ್ಪಿ ನಾಗಪ್ಪ, ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಬಸವರಾಜ್ ಸಿಬ್ಬಂದಿಯೊಂದಿಗೆ ಆರೋಪಿಯನ್ನು ರೆಸಾರ್ಟ್ ಕೊಠಡಿಯಲ್ಲೇ ಸೆರೆ ಹಿಡಿದಿದ್ದಾರೆ.

ಈ ವೇಳೆ ಆತನೊಂದಿಗಿದ್ದ ಪತ್ನಿ (ಮಹಿಳೆ) ತನಗೇನೂ ಮಾಹಿತಿಯಿಲ್ಲ ವೆಂದು ಅಳಲು ತೋಡಿಕೊಂಡ ಮೇರೆಗೆ ಆಕೆಯನ್ನು ಬಿಟ್ಟು ವಂಚಕನನ್ನು ವಶಕ್ಕೆ ಪಡೆದು ಕಾಯ್ಕೆ 170, 419, 420 ಐ.ಪಿ.ಸಿ. ರೀತಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಆರೋಪಿಯು ಈ ರೀತಿ ಬೇರೆ ಬೇರೆ ಕಡೆಗಳಲ್ಲಿ ವಂಚಿಸಿರುವದು ಬಹಿರಂಗಗೊಂಡಿದೆ.

ಆರೋಪಿಯ ಹಿನ್ನೆಲೆ : ಆತನ ನಡವಳಿಕೆಯಿಂದ ಅನುಮಾನಗೊಂಡು ಅಂಬಟ್ಟಿ ಗ್ರೀನ್ಸ್ ರೆಸಾರ್ಟ್‍ಗೆ ಹೋಗಿ ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಾನು ಸೌಮ್ಯ ರಂಜನ್ ಮಿಶ್ರ, ತಂದೆ ರಾಧಾಕಾಂತ್ ಮಿಶ್ರ, 32 ವರ್ಷ, ಸ್ವಂತ ಊರು ಸುಕಿಗೋಪಾಲ್, ತಾಲೂಕು, ಬೀರಾರಾಂ, ಚಂದ್ರಪುರ್ ಗ್ರಾಮ, 1ನೇ ಖಂಡಿ, ಪುರಿ ಜಿಲ್ಲೆ, ಒಡಿಸ್ಸಾ ರಾಜ್ಯ ಎಂದು ಹೇಳಿಕೊಂಡಿದ್ದಾನೆ.

ತಾನು ಎಂ.ಸಿ.ಎ. ಪದವೀಧರನಾಗಿದ್ದು, ಎಂಪ್ಲಾಯಿ ಮೆಂಟ್ ಪ್ರಾವಿಡೆಂಡ್ ಫಂಡ್‍ನಲ್ಲಿ ಕಾಂಟ್ರಾಕ್ಟ್‍ನಲ್ಲಿ ಸಾಫ್ಟ್‍ವೇರ್ ಡೆವಲಪ್ಪರ್ ಆಗಿ ಈ ಹಿಂದೆ ಕೆಲಸ ಮಾಡುತ್ತಿದ್ದುದಾಗಿ ತನಗೆ ಇಲಾಖಾ ಅಧಿಕಾರಿಯಂತೆ ನಟಿಸಿ ಸವಲತ್ತು ಕೇಳಿದರೆ ತಕ್ಷಣ ಸಿಗುವದೆಂದು ಈ ರೀತಿ ರೀಜನಲ್ ಕಮಿಷನರ್ ಎಂದು ಸುಳ್ಳು ಹೇಳಿಕೊಂಡು ಸರ್ಕಾರಿ ವಾಹನವನ್ನು ಉಪಯೋಗಿಸಿಕೊಂಡು ವಂಚನೆ ಮಾಡಿರುವದಾಗಿ ಒಪ್ಪಿಕೊಂಡಿದ್ದಾನೆ. ಈತನ ವಿರುದ್ಧ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ. ಸಂ. 76/2018 ಕಲಂ. 170, 419, 420 ಐ.ಪಿ.ಸಿ. ರೀತ್ಯ ಪ್ರಕರಣ ದಾಖಲಿಸಿಕೊಂಡು ದಸ್ತಗಿರಿ ಮಾಡಲಾಗಿದೆ. ಈ ರೀತಿ ಸುಳ್ಳು ಹೇಳಿ ಸರಕಾರಿ ನೌಕರರಿಗೆ ಹಾಗೂ ಇತರೆ ಸಾರ್ವಜನಿಕರಿಗೆ ಮೋಸ ಮಾಡುವ ಜನರ ಬಗ್ಗೆ ಕೊಡಗು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಎಚ್ಚರದಿಂದ ಇರುವಂತೆ ಸಲಹೆ ನೀಡಿದ್ದಾರೆ.

ಆರೋಪಿಯನ್ನು 15 ದಿನಗಳ ನ್ಯಾಯಾಂಗ ವಶಕ್ಕೆ ನೀಡಿದ್ದು, ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ.