ಕೂಡಿಗೆ, ಮಾ. 30: ಕಾವೇರಿ ನದಿಯಿಂದ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 12 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ರೂ. 12 ಕೋಟಿ ವೆಚ್ಚದ ಬೃಹತ್ ಯೋಜನೆಯು ಪ್ರಾರಂಭಗೊಂಡು ಹತ್ತು ವರ್ಷಗಳು ಕಳೆದಿದೆ. ಕಾವೇರಿ ನದಿಯಿಂದ ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಕಟ್ಟಡದ ಸಮೀಪವಿರುವ 2.5 ದಶಲಕ್ಷ ಸಾಮಾಥ್ರ್ಯದ ಬೃಹತ್ ನೀರಿನ ಟ್ಯಾಂಕ್, ನೀರು ಶುದ್ಧೀಕರಣದ ಘಟಕ, ಬೃಹತ್ತಾದ ಪೈಪ್‍ಲೈನ್‍ಗಳ ಮೂಲಕ ನದಿಯಿಂದ ನೀರನ್ನು ಟ್ಯಾಂಕಿಗೆ ಸರಬರಾಜು ಮಾಡಿಕೊಂಡು ನಂತರ ಅದೇ ಕೇಂದ್ರದಲ್ಲಿ ಶುದ್ಧೀಕರಣಗೊಳಿಸಿ ಆರು ಗ್ರಾಮ ಪಂಚಾಯಿತಿಯ 12 ಹಳ್ಳಿಗಳ ಟ್ಯಾಂಕ್‍ಗಳಿಗೆ ಸರಬರಾಜು ಮಾಡುವ ಉದ್ದೇಶ ಹೊಂದಿದೆ. ಆದರೆ ಇದೀಗ ಶುದ್ಧೀಕರಣ ಘಟಕದಲ್ಲಿ ಒಂದು ಯಂತ್ರ ಕಾರ್ಯನಿರ್ವಹಿಸುತ್ತಿದ್ದು, ಇನ್ನೊಂದು ಯಂತ್ರ ಸ್ಥಗಿತಗೊಂಡಿದೆ. ಇದರ ದುರಸ್ತಿಗೆ ಇಲಾಖೆಯವರು ಮುಂದಾಗದ ಕಾರಣದಿಂದಾಗಿ 12 ಹಳ್ಳಿಗಳ ಜನರು ಶುದ್ಧೀಕರಣಗೊಳ್ಳದ ನೀರನ್ನು ಕುಡಿಯುವ ಪರಿಸ್ಥಿತಿ ಎದುರಾಗಿದೆ.

ಒಳಚರಂಡಿ ಮತ್ತು ನೀರು ಸರಬರಾಜು ಇಲಾಖೆ ಸುಮಾರು 5 ವರ್ಷಗಳವರೆಗೆ ಇದರ ವ್ಯವಸ್ಥೆಯನ್ನು ನೋಡಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಿ 2014 ರಿಂದ ಜಿಲ್ಲಾ ಪಂಚಾಯಿತಿಗೆ ವಹಿಸಿದೆ.ಹೆಬ್ಬಾಲೆಯ ಹೃದಯ ಭಾಗದಲ್ಲಿ ನೀರು ಶುದ್ಧೀಕರಣ ಘಟಕ ಹಾಗೂ ಬೃಹತ್ ನೀರಿನ

(ಮೊದಲ ಪುಟದಿಂದ) ಟ್ಯಾಂಕ್ ಅನ್ನು ನಿರ್ಮಾಣಗೊಳಿಸಿ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೂಡಿಗೆ ವ್ಯಾಪ್ತಿಗೆ ಮಾತ್ರ ಸರಬರಾಜಾಗುತ್ತಿದೆ. ಆದರೆ, ಬಹುದೊಡ್ಡ ಯೋಜನೆ ಯಾಗಿರುವ ಕುಡಿಯುವ ನೀರಿನ ಯೋಜನೆ ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೂಡ್ಲೂರು ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸರಬರಾಜಾಗುತ್ತಿಲ್ಲ.

ಶಿರಂಗಾಲದಿಂದ ಮುಳ್ಳುಸೋಗೆ ಗ್ರಾಮ ಪಂಚಾಯಿತಿವರೆಗೆ ಬೃಹತ್ ಪೈಪ್‍ಗಳನ್ನು ಅಳವಡಿಸಿ ಅವುಗಳ ಮೂಲಕ ನೀರನ್ನು ಹರಿಸಲು ಹೆಬ್ಬಾಲೆಯಿಂದ ಬಂದ ನೀರನ್ನು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ತಾಲೂಕು ಪಂಚಾಯಿತಿ ಅನುದಾನ ದಲ್ಲಿ ನಿರ್ಮಿಸಿಕೊಂಡಿರುವ ಟ್ಯಾಂಕ್‍ಗಳಿಗೆ ತುಂಬಿಸಿ ನಂತರ ಎಲ್ಲಾ ಗ್ರಾಮದ ಬೀದಿಗಳಿಗೆ ನೀರೋದ ಗಿಸುವ ಯೋಜನೆ ಇದಾಗಿದೆ. ಆದರೆ, ಇದೀಗ ಹೆಬ್ಬಾಲೆಯಿಂದ ಬಂದ ನೀರನ್ನು ಗ್ರಾಮ ಪಂಚಾಯಿತಿಗಳಲ್ಲೂ ಪರಿಶೀಲಿಸದೆ ನೇರವಾಗಿ ಮನೆಗಳಿಗೆ ಸರಬರಾಜು ಮಾಡುವ ಕಾರ್ಯದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಯವರು ತಲ್ಲೀನರಾಗಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಕಾವೇರಿ ನದಿಯಲ್ಲೂ ನೀರು ಕಡಿಮೆಯಾಗಿ ಕಲ್ಮಶ ನೀರು ಶುದ್ಧೀಕರಣ ಕೇಂದ್ರಕ್ಕೆ ಬರುತ್ತಿದ್ದು, ಈ ನೀರನ್ನೇ ಶುದ್ಧೀಕರಣ ಮಾಡದೆ ನೇರವಾಗಿ ಕುಡಿಯಲು ಸರಬರಾಜು ಮಾಡುತ್ತಿದ್ದು, ಇದರಿಂದ ಜನರಿಗೆ ರೋಗ-ರುಜಿನಗಳು ಹೆಚ್ಚಾಗುತ್ತಿವೆ.

ಕೋಟಿಗಟ್ಟಲೇ ಸರಕಾರದ ಹಣವನ್ನು ವಿನಿಯೋಗಿಸಿ ಕುಡಿಯುವ ನೀರನ್ನು ಒದಗಿಸುತ್ತೇವೆ ಎಂದು ಬೃಹತ್ ಯೋಜನೆಯನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತಂದು ಇದುವರೆಗೂ ನೀರು ಮಾತ್ರ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಿಗೆ ತಲಪಿಲ್ಲ.

ಕುಡಿಯುವ ನೀರು ಮಾತ್ರ ಗ್ರಾಮಗಳಿಗೆ ತಲಪಿಲ್ಲ. ಹಣ ಮಾತ್ರ ಗುತ್ತಿಗೆದಾರನಿಗೆ ಕೈಸೇರಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೂಡ್ಲೂರು ಮತ್ತು ಮುಳ್ಳುಸೋಗೆ ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇತ್ತ ಮುಳ್ಳುಸೋಗೆಗೆ ಕುಶಾಲನಗರ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಯಿಂದಲೂ ನೀರು ಸರಬರಾಜು ಮಾಡುತ್ತಿದ್ದರೂ ಇದೀಗ ಕಾವೇರಿ ನದಿ ಬತ್ತಿರುವ ಹಿನ್ನೆಲೆ ನೀರೊದಗಿಸಲು ಹರಸಾಹಸ ಪಡುತ್ತಿದ್ದಾರೆ.

ಜಿಲ್ಲಾ ಪಂಚಾಯಿತಿಯು ಬೃಹತ್ ನೀರಿನ ಯೋಜನೆಯ ಉಸ್ತುವಾರಿ ಯನ್ನು ವಹಿಸಿಕೊಂಡಿರು ವದರಿಂದ ನೀರಿಗೆ ಹಾಹಾಕಾರ ಬಂದೊದಗಿರುವ ಸಂದರ್ಭ ಇತ್ತ ಗಮನಹರಿಸಿ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಈ ವ್ಯಾಪ್ತಿಯ ಸಾರ್ವಜನಿಕರ ಆಗ್ರಹವಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ.