ಮಡಿಕೇರಿ, ಮಾ. 30: ಗೋಣಿಕೊಪ್ಪ ಪುತ್ತರಿ ರೈತ ಉತ್ಪಾದಕರ ಸಂಸ್ಥೆ ಪ್ರಗತಿಯತ್ತ ಹೆಜ್ಜೆ ಹಾಕುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ರೂ. 27 ಲಕ್ಷ ವಹಿವಾಟು ನಡೆಸಿದೆ. ಸಂಸ್ಥೆ ಮುಂದಿನ ಸಾಲಿನಲ್ಲಿ ಒಂದು ಕೋಟಿ ರೂಪಾಯಿ ವ್ಯವಹಾರ ನಡೆಸುವ ಗುರಿ ಹೊಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಮನೆಯಪಂಡ ರಾಜ ಸೋಮಯ್ಯ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಂತಹ ಪ್ರದೇಶದಲ್ಲಿ ಅನಾವೃಷ್ಟಿ-ಅತಿವೃಷ್ಟಿಯಿಂದ ಬೆಳೆದ ಬೆಳೆಯಲ್ಲೂ ಅರ್ಧಭಾಗ ನಾಶವಾಗುತ್ತಿದ್ದು, ಜೊತೆಗೆ ವನ್ಯಪ್ರಾಣಿಗಳ ಹಾವಳಿಯಿಂದಲೂ ಬೆಳೆಗಳು ನಾಶವಾಗುತ್ತಿದೆ. ಕೂಲಿ ಕಾರ್ಮಿಕರ ಸಮಸ್ಯೆ ಕೂಡ ಹೆಚ್ಚಾಗಿದ್ದು, ಮಧ್ಯವರ್ತಿಗಳ ದುರಾಸೆಯಿಂದಾಗಿ ಬೆಳೆಗೆ ಉತ್ತಮ ಬೆಲೆಯೂ ದೊರಕುತ್ತಿಲ್ಲ ಎಂದು ಆರೋಪಿಸಿದರು.
ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ಎಂಬಂತೆ ಕೇಂದ್ರ ಸರಕಾರ ರೈತನ ಕಷ್ಟಗಳನ್ನು ಮನಗಂಡು 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಸಂಕಲ್ಪ ಮಾಡಿದೆ. ರೈತರಿಂದಲೇ ರೈತರಿಗಾಗಿ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ತಾವು ಬೆಳೆದ ಬೆಳೆಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಗ್ರಾಹಕರಿಗೆ ತಲಪಿಸಲು ಮತ್ತು ರೈತರಿಗೆ ಬೇಕಾಗುವ ಗೊಬ್ಬರ ಕ್ರಿಮಿನಾಶಕ, ಯಂತ್ರೋಪಕರಣ ಮತ್ತಿತರ ಪರಿಕರಗಳನ್ನು ಮಧ್ಯವರ್ತಿ ಗಳಿಲ್ಲದೆ ಕಾರ್ಖಾನೆಯಿಂದ ನೇರವಾಗಿ ರೈತರಿಗೆ ತಲಪಿಸುವ ನಿಟ್ಟಿನಲ್ಲಿ ರೈತ ಉತ್ಪಾದಕರ ಸಂಸ್ಥೆಯನ್ನು ಹುಟ್ಟು ಹಾಕುವ ಯೋಜನೆ ರೂಪಿಸಿದೆ ಎಂದು ರಾಜು ಸೋಮಯ್ಯ ಹೇಳಿದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆ ಪ್ರಸಕ್ತ ರೈತರಿಗೆ ಅಗತ್ಯವಿರುವ ಕಾಫಿ ಕೊಯ್ಯಲು ಬೇಕಾಗಿರುವ ತಾಟು, ಚೀಲಗಳು, ಕಾಫಿ ಹಾಗೂ ಕರಿಮೆಣಸು ಒಣಗಿಸಲು ಬೇಕಾದ ಉತ್ತಮ ದರ್ಜೆಯ ನೆರಳು ಬಲೆ ಇತ್ಯಾದಿಗಳನ್ನು ಮಾರುಕಟ್ಟೆ ದರಕ್ಕಿಂತ ಶೇ. 10 ರಿಂದ 20 ರಷ್ಟು ಕಡಿಮೆ ದರದಲ್ಲಿ ರೈತರಿಗೆ ಮಾರಾಟ ಮಾಡಿದೆ.
ಇದರ ಜೊತೆಗೆ ಬಟರ್‍ಫ್ರುಟ್ (ಬೆಣ್ಣೆ ಹಣ್ಣು)ಗೆ ಮಾರುಕಟ್ಟೆ ದರಕ್ಕಿಂತ ಶೇ. 10 ರಿಂದ 20 ರಷ್ಟು ಹೆಚ್ಚು ದರ ರೈತರಿಗೆ ದೊರಕುವಂತೆ ಮಾಡಿದೆ. ಇದರೊಂದಿಗೆ ರೈತರಿಗೆ ಬೇಕಾದ ಡೋಲೋಮೈಟ್ ಸುಣ್ಣವನ್ನು ಕೂಡಾ ಮಾರುಕಟ್ಟೆ ದರಕ್ಕಿಂತ ಶೇ. 20 ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡಿದೆ ಎಂದು ವಿವರಿಸಿದರು.
ಸಂಸ್ಥೆಯ ಮೊದಲ ವರ್ಷದ ಮಹಾಸಭೆ ಕಳೆದ ಫೆಬ್ರವರಿಯಲ್ಲಿ ನಡೆಸಲಾಗಿದ್ದು, ಪ್ರಸಕ್ತ 165 ಮಂದಿ ಸದಸ್ಯರಿರುವ ಸಂಸ್ಥೆಯ ಮುಂದಿನ ಸಾಲಿನ ಆಡಳಿತ ಮಂಡಳಿಗೆ 10 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಂದ ಕಾಫಿ, ಕರಿಮೆಣಸು ಖರೀದಿಸಿ ಅದನ್ನು ಸಂಸ್ಕರಿಸಿ ವಿದೇಶಗಳಿಗೆ ರಫ್ತು ಮಾಡುವ ಯೋಜನೆಯೂ ಸಂಸ್ಥೆಗಿದ್ದು, ಇದಕ್ಕಾಗಿ ಸಂಸ್ಥೆಗೆ ತನ್ನದೇ ಆದ ಕಟ್ಟಡವನ್ನು ನಿರ್ಮಿಸುವ ಚಿಂತನೆಯೂ ಇದೆ ಎಂದು ರಾಜ ಸೋಮಯ್ಯ ತಿಳಿಸಿದರು.
ಪೊನ್ನಂಪೇಟೆ ಅರಣ್ಯ ಕಾಲೇಜಿನ ಬಳಿ ಇರುವ ಸುಮಾರು 25 ಸೆಂಟ್ ಜಾಗವನ್ನು ತಾನು ಸಂಸ್ಥೆಗೆ ದಾನವಾಗಿ ನೀಡಲು ಸಿದ್ಧವಿರುವದಾಗಿ ತಿಳಿಸಿದ ಅವರು, 2022 ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಕೇಂದ್ರ ಸರಕಾರದ ಸಂಕಲ್ಪವನ್ನು ಕಾರ್ಯಗತ ಮಾಡಲು ಸಂಸ್ಥೆಯು ತನ್ನ ನಿಯಮಗಳಡಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.
ಗೋಷ್ಠಿಯಲ್ಲಿ ನಿರ್ದೇಶಕರಾದ ಕೋಟ್ರಮಾಡ ಅರುಣ್ ಅಪ್ಪಣ್ಣ, ಹಾಗೂ ಉದ್ದಪಂಡ ಟಿ. ಕಾರ್ಯಪ್ಪ ಹಾಜರಿದ್ದರು.