ವೀರಾಜಪೇಟೆ, ಮಾ. 30: ರಂಗಭೂಮಿಗೆ ಜೀವಂತಿಕೆಯ ಕಾಯಕಲ್ಪ ಕೊಟ್ಟವರು ರಂಗಕರ್ಮಿ ಅಡ್ಡಂಡ ಕಾರ್ಯಪ್ಪ. ಅಪ್ಪಚ್ಚ ಕವಿಯ ನಂತರ ಕೊಡಗಿನ ನಾಟಕ ಕ್ಷೇತ್ರ ಕ್ಷೀಣಿಸುತ್ತಾ ಬಂತು. ನಂತರ 70ರ ದಶಕದಲ್ಲಿ ಕೆಲವರು ನಾಟಕ ಕ್ಷೇತ್ರಕ್ಕೆ ತಮ್ಮದೇ ಆದ ಕಾಣಿಕೆ ಸಲ್ಲಿಸಿದ್ದರೂ ಕರ್ನಾಟಕದ ರಂಗಭೂಮಿಯಲ್ಲಿ ಕೊಡಗಿನ ರಂಗಭೂಮಿಯನ್ನು ಗುರುತಿಸುವಂತೆ ಮಾಡಿದ್ದು ಕಾರ್ಯಪ್ಪ ದಂಪತಿಗಳು. ಇದಕ್ಕೆ ಕಾರಣ ಅವರ ರಂಗ ಪ್ರೀತಿ ಮತ್ತು ಬದ್ಧತೆ ಎಂದು ರಂಗ ಕಲಾವಿದ ಕಾಂಡೇರ ಡಾನ್ ಕುಶಾಲಪ್ಪ ಅಭಿಪ್ರಾಯ ವ್ಯಕ್ತ ಪಡಿಸಿದರು.
ವೀರಾಜಪೇಟೆ ರೋಟರಿ ಸಂಸ್ಥೆ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಆಶ್ರಯದಲ್ಲಿ ತಾ. 28 ರಂದು ರೋಟರಿ ಸಭಾಂಗಣದಲ್ಲಿ ನಡೆದ ‘ವಿಶ್ವ ರಂಗಭೂಮಿ ದಿನಾಚರಣೆ’ ಸಂಭ್ರಮದ ಕಾರ್ಯಕ್ರಮದಲ್ಲಿ ರಂಗ ಗೌರವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಕೊಡಗಿನಲ್ಲಿ ಹರದಾಸ ಅಪ್ಪಚ್ಚಕವಿ ರಂಗಭೂಮಿಯ ಪಿತಾಮಹ, ಆದರೆ ಕನ್ನಡ ಮತ್ತು ಕೊಡವ ಭಾಷೆಯ ಕೊಂಡಿಯಾಗಿ ಸೃಷ್ಠಿ ಸಂಸ್ಥೆ ಕೆಲಸ ಮಾಡಿದೆ. ಜಾನಪದ ಉತ್ಸವಗಳನ್ನು ನಡೆಸಿದೆ. ಇದರ ಫಲವಾಗಿ ಕರ್ನಾಟಕ ರಂಗ ಭೂಮಿಯಲ್ಲಿ ಕೊಡಗು ಗುರುತಿಸುವಂತೆ ಆಯಿತು. ಈ ಎಲ್ಲಾ ಪ್ರಕ್ರಿಯೆಗಳಲ್ಲಿ ನಾನು ಕೂಡ ಭಾಗಿಯಾಗಿದ್ದೆ ಎಂಬ ಹೆಮ್ಮೆಯಿದೆ ಎಂದರು.
ಮುಖ್ಯ ಅತಿಥಿ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಮಾತನಾಡಿ, ವಿಶ್ವ ರಂಗಭೂಮಿ ದಿನ ಎಲ್ಲಾ ರಂಗಕಲಾವಿದರ ಜನ್ಮ ದಿನ. ಈ ವರ್ಷವನ್ನು ಅಪ್ಪಚ್ಚಕವಿಯ ರಂಗವರ್ಷ ಎಂದು ಆಚರಿಸುವ ಮೂಲಕ ಕೊಡಗಿನ ರಂಗಪಿತಾಮಹನಿಗೆ ಅರ್ಪಿಸುತ್ತಿದ್ದೇವೆ ಎಂದರು. ಈ ಸಂದರ್ಭ ಕೊಡಗಿನ ರಂಗಭೂಮಿಗಾಗಿ ದುಡಿದ ಹಿರಿಯ ರಂಗನಟ ಗುಮ್ಮಟೀರ ಸೋಮಯ್ಯ, ಹಾರ್ಮೋನಿಯಮ್ ಮೇಸ್ಟ್ರು ಎಂ.ಆರ್. ಚಂದ್ರಶೇಖರ್, ಆಧುನಿಕ ರಂಗನಟ ಕಾಂಡೇರ ಡಾನ್ ಕುಶಾಲಪ್ಪ ಇವರಿಗೆ ರಂಗಭೂಮಿ ಪ್ರತಿಷ್ಠಾನ “ರಂಗ ಗೌರವ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ವಿಶ್ವ ರಂಗ ಭೂಮಿ ದಿನದ ವಿಶೇಷವಾಗಿ ರಂಗಭೂಮಿ ಪ್ರತಿಷ್ಠಾನ ಪೊನ್ನಂಪೇಟೆ ಅಪ್ಪಚ್ಚಕವಿಯ 150ನೇ ಜನ್ಮೋತ್ಸವದ ನೆನಪಿಗೆ ಅಮರ ಕಾವ್ಯ ಎಂಬ ಗಾಯನ ವ್ಯಾಖ್ಯಾನ ಕಾರ್ಯಕ್ರಮ ಪ್ರೇಕ್ಷಕರ ಅಪಾರ ಮೆಚ್ಚುಗೆಗಳಿಸಿತು. ಈ ಕಾರ್ಯಕ್ರಮವನ್ನು ಕಾರ್ಯಪ್ಪ, ಮದ್ರೀರ ಸಂಜು ಬೆಳ್ಯಪ್ಪ, ಆಂಗಿರ ಕುಸುಮ್ ಮಾದಪ್ಪ, ವಿ.ಟಿ. ಶ್ರೀನಿವಾಸ್, ಚಂದ್ರು, ಅನಿತಾ ಕಾರ್ಯಪ್ಪ ನಡೆಸಿ ಕೊಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಶಾಂತರಾಮ್ ಕಾಮತ್ ವಹಿಸಿದ್ದರು. ಡಾ. ನರಸಿಂಹನ್ ಕಾರ್ಯಕ್ರಮ ನಿರೂಪಿಸಿ, ಅದಿತ್ಯ ಹೇಮ ಚಂದ್ರ ಸ್ವಾಗತಿಸಿದರು.