ಕೂಡಿಗೆ, ಮಾ. 29: ಕೂಡಿಗೆ 80 ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ಭಾರೀ ಗಾತ್ರದ ಆಲಿಕಲ್ಲು ಸುರಿಮಳೆ ಸುಮಾರು 2 ಗಂಟೆಗಳ ಕಾಲ ಸ್ಥಳೀಯ ಜನರು ಸ್ತಂಭೀಭೂತ ವಂತಾಗುವಂತೆ ಮಾಡಿತ್ತು. ಜಲಧಾರೆಯೋ ಅಥವಾ ಆಲಿಕಲ್ಲಿನ ಸುರಿಮಳೆಯೋ ಎಂಬ ಸ್ಥಿತಿ ಒದಗಿತ್ತು. ಮಳೆಗಿಂತ ಅಧಿಕ ಮೇಘಗಳ ತುಂಡುಗಳೇ ತಡಬಡನೆ ಮನೆಗಳ ಛಾವಣಿ ಮೇಲೆ, ನೆಲದ ಮೇಲೆ ಬೀಳುವ ದೃಶ್ಯ

(ಮೊದಲ ಪುಟದಿಂದ) ಒಂದೆಡೆ ವಿಚಿತ್ರ ಹಾಗೂ ಆಕರ್ಷಕವೆನಿಸಿದರೂ ಮತ್ತೊಂದೆಡೆ ಕೂಡಿಗೆ ನಿವಾಸಿಗಳನ್ನು ಭಯಭೀತಿಗೆ ಒಳಪಡಿಸಿತ್ತು.

ಸಂಜೆ 4 ರಿಂದ 6 ಗಂಟೆಯವರೆಗೆ ಸುರಿದ ಆಲಿಕಲ್ಲಿನ ರಾಶಿ ಎಲ್ಲಾ ಮನೆಗಳ ಆವರಣದಲ್ಲಿ ಶ್ವೇತ ಮೋಡಗಳಂತೆ ಕಂಡು ಬಂದಿತು. ಈ ಆಲಿಕಲ್ಲು ಪೂರ್ಣವಾಗಿ ಕರಗಲು ಸುಮಾರು 2 ಗಂಟೆಯ ಕಾಲಾವಕಾಶ ಬೇಕಾಯಿತು. ಮಳೆ - ಗಾಳಿಯಿಂದಾಗಿ ಸಮೀಪದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಅಡುಗೆ ಮನೆಯ ಛಾವಣಿ ಹಾರಿದ್ದು, ದೇವಾಲಯ ಸನಿಹ ನಿಲ್ಲಿಸಿದ್ದ ವ್ಯಾನ್ ಒಂದಕ್ಕೆ ಅಪ್ಪಳಿಸಿ ಮುಂಭಾಗದ ಗಾಜುಗಳು ಪುಡಿಯಾದವು. ಅಡುಗೆ ಮನೆ ಸಂಪೂರ್ಣ ಹಾನಿಗೊಂಡಿದೆ. ಕೂಡಿಗೆ ವ್ಯಾಪ್ತಿಯಲ್ಲಿ ಸುಮಾರು 3 ಇಂಚು ಮಳೆ ಸುರಿದಿದೆ.ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿಯೂ ಇಂದು ಸಂಜೆ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದೆ. ಗುಮ್ಮನಕೊಲ್ಲಿ, ಮಾದಾಪಟ್ಟಣ, ಗುಡ್ಡೆಹೊಸೂರು ಸನಿಹದ ಕೊಪ್ಪ ಹಾಗೂ ಏಳನೇ ಹೊಸಕೋಟೆವರೆಗೆ ಮಳೆಯಾಗಿದೆ.

ಸುಮಾರು 1 ಗಂಟೆಗಳ ಕಾಲ ಸುರಿದ ಭಾರೀ ಮಳೆಯಿಂದಾಗಿ ಕುಶಾಲನಗರ ಸರ್ಕಾರಿ ಬಸ್ ನಿಲ್ದಾಣ ಸಂಪೂರ್ಣ ಜಲಾವೃತ ಗೊಂಡಿತ್ತು. ಸುಂದರ ನಗರದ ಬಳಿ ಮರವೊಂದು ಧರೆಗುಳಿದಿದೆ. ನಾಗಮ್ಮ ಮಂಟಿ ಬಳಿ ಛಾವಣಿಯ ಶೀಟು ಹಾರಿ ವ್ಯಕ್ತಿಯೋರ್ವನ ಕೈಗೆ ಗಾಯಗಳಾಗಿವೆ. ಸೋಮೇಶ್ವರ ಬಡಾವಣೆಯ ಅಶೋಕ್ ಎಂಬವರಿಗೆ ಸೇರಿದ ದನದ ಕೊಟ್ಟಿಗೆ ಶೀಟುಗಳು ಗಾಳಿಗೆ ಹಾರಿಹೋಗಿವೆ. ಕೂಡಿಗೆಯ 80 ವರ್ಷದ ವಯೋವೃದ್ಧ ಜಯಣ್ಣ ಎಂಬವರ ಅನಿಸಿಕೆಯಂತೆ ತನ್ನ ಜೀವಮಾನ ದಲ್ಲಿಯೇ ಇಷ್ಟೊಂದು ಪ್ರಮಾಣದ ಆಲಿಕಲ್ಲು ಮಳೆಯನ್ನು ನಾನು ಪ್ರಥಮ ಬಾರಿಗೆ ನೋಡುವಂತಾಗಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಕುಟ್ಟ, ಪೊನ್ನಂಪೇಟೆ ಗೋಣಿಕೊಪ್ಪ ವಿಭಾಗದಲ್ಲಿ ಮಳೆಯಾಗಿದೆ.

-ವರದಿ ನಾಗರಾಜು ಶೆಟ್ಟಿ, ಚಂದ್ರಮೋಹನ್