ಕುಶಾಲನಗರ, ಮಾ. 30: ಅಭಿವೃದ್ಧಿಯ ಹೆಸರಿನಲ್ಲಿ ರಕ್ಷಿತಾರಣ್ಯಗಳ ನಡುವೆ ಮಾನವನ ಚಟುವಟಿಕೆಗಳು ಅಧಿಕಗೊಳ್ಳುತ್ತಿರುವ ಬೆನ್ನಲ್ಲೇ ವನ್ಯಜೀವಿಗಳಿಗೆ ಮಾರಕವಾಗುವದರೊಂದಿಗೆ ಪ್ರಸಕ್ತ ದಿನಗಳಲ್ಲಿ ಆನೆ-ಮಾನವ ಸಂಘರ್ಷದ ನಡುವೆ ಇತರ ವನ್ಯಜೀವಿಗಳ ಆರ್ತನಾದ ತಾರಕಕ್ಕೇರಿರುವ ಪ್ರಕರಣಗಳು ಗೋಚರಿಸಿದೆ.ಜಿಲ್ಲೆಯ ವಿವಿಧೆಡೆ ಹಲವು ಕಾರಣಗಳಿಂದ ಕಾಡಿನಿಂದ ನಾಡಿಗೆ ಲಗ್ಗೆಯಿಡುತ್ತಿರುವ ಹಲವು ಕಾಡಾನೆಗಳಿಂದ ಕೃಷಿ ಚಟುವಟಿಕೆಗಳಿಗೆ ನಷ್ಟವುಂಟಾಗುವದರೊಂದಿಗೆ ಜಿಲ್ಲೆಯ ಜನತೆ ಭಯದೊಂದಿಗೆ ದಿನದೂಡಬೇಕಾದ ಪರಿಸ್ಥಿತಿ ಉಂಟಾಗಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಆಹಾರ ಅರಸಿಕೊಂಡು ಬರುತ್ತಿರುವ ಕಾಡಾನೆಗಳ ಮಾರಣ ಹೋಮ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ.ಕೆಲವು ಸಮಯದಿಂದ ಮಡಿಕೇರಿ, ವೀರಾಜಪೇಟೆ ವ್ಯಾಪ್ತಿಯ 20 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಹಗಲಿರುಳೆನ್ನದೆ ನಾಡಿಗೆ ಲಗ್ಗೆ ಇಡುವದರೊಂದಿಗೆ ಜನರ ನಿದ್ದೆಗೆಡಿಸುತ್ತಿದ್ದವು. ದಿನನಿತ್ಯ ಇವುಗಳ ಸ್ಥಳಾಂತರ ಕಾರ್ಯಾಚರಣೆ ಅರಣ್ಯ ಇಲಾಖೆ ಮೂಲಕ ನಡೆದಿದೆ. ಆದರೆ ಇತ್ತೀಚಿನ ಕಾಡ್ಗಿಚ್ಚಿನಿಂದ ವನ್ಯಜೀವಿಗಳಿಗೆ ಆಹಾರದ ಅಭಾವ ತಲೆದೋರಿದ್ದು ಈ ಬಗ್ಗೆ ಅರಣ್ಯ ಇಲಾಖೆ ಸೇರಿದಂತೆ ಜಿಲ್ಲಾಡಳಿತ ಸಂಪೂರ್ಣ ಮೌನವಹಿಸಿದೆ. ಇದರ ಪರಿಣಾಮವಾಗಿ ಕಳೆದ ಕೆಲವೇ ತಿಂಗಳುಗಳ ಅವಧಿಯಲ್ಲಿ 20 ಕ್ಕೂ ಅಧಿಕ ಕಾಡಾನೆಗಳ ಮಾರಣ ಹೋಮ ನಡೆದಿದೆ. ಅಧಿಕಾರಿ, ಸಿಬ್ಬಂದಿ, ನಾಗರಿಕರ ನಡುವೆ ಸೃಷ್ಠಿಯಾಗಿರುವ ಅಂತರವೇ ಈ ಆವಾಂತರಕ್ಕೆ ಕಾರಣವಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ಜೂನ್ ತಿಂಗಳಲ್ಲಿ ವೀರಾಜಪೇಟೆ ತಾಲೂಕಿನ ಅಮ್ಮತ್ತಿ-ಒಂಟಿಯಂಗಡಿ ಸಮೀಪ ವಿದ್ಯುತ್ ಅವಘಡದಿಂದ 4 ಆನೆಗಳು ಮೃತಪಟ್ಟರೆ ಅನಂತರ ಒಂದೇ ದಿನದಲ್ಲಿ 3 ಆನೆಗಳು ಜೀವ ಕಳೆದುಕೊಂಡಿವೆ. ಇತ್ತೀಚೆಗೆ ಆಹಾರ ಅರಸಿಕೊಂಡು ಬಂದ ಹೆಣ್ಣಾನೆಯೊಂದು ಕೆಸರಿನಲ್ಲಿ ಸಿಲುಕಿ ಪ್ರಾಣತೆತ್ತಿದೆ. ಇತ್ತ ಕಣಿವೆ ಬಳಿ ಆನೆಗಳ ಹಿಂಡು ಹೆದ್ದಾರಿ ರಸ್ತೆಯಲ್ಲಿ ಹಾಡಹಗಲೇ ಸಂಚರಿಸುತ್ತಿದೆ. ಮಾನವನ ಪ್ರಾಣಹಾನಿಯೂ ನಡೆಯುವದರೊಂದಿಗೆ ಕಾಡಾನೆಗಳ ಸಂತಾನ ಅವಸಾನದತ್ತ ಸಾಗುತ್ತಿರುವದು ಮಾತ್ರ ಆತಂಕದ ಬೆಳವಣಿಗೆಯಾಗಿದೆ.

ಇದೀಗ ರಕ್ಷಿತಾರಣ್ಯಗಳಲ್ಲಿ ಕಾಡಾನೆಗಳು ತಮ್ಮ ಜೀವ ರಕ್ಷಣೆಗಾಗಿ ಸೆಣಸಾಟ ಮಾಡುವ ಪರಿಸ್ಥಿತಿ ಉಂಟಾಗಿದೆ. ಕಾಡಿನಲ್ಲಿ ಆಹಾರದ ಕೊರತೆ, ಬೇಸಿಗೆಯಲ್ಲಿ ಕಾಡ್ಗಿಚ್ಚಿನ ಭಯ, ಮಳೆಗಾಲದಲ್ಲಿ ತನ್ನ ಮರಿಗಳ ರಕ್ಷಣೆಗಾಗಿ ಪರದಾಟ, ಅರಣ್ಯದಂಚಿನಲ್ಲಿ ಅಕ್ರಮ ಬೇಟೆಗಾರರ ಆರ್ಭಟದೊಂದಿಗೆ ಕಾಡಿನಂಚಿನಲ್ಲಿ ಲಗ್ಗೆಯಿಡುತ್ತಿರುವ ಪ್ರವಾಸಿಗರ ಒತ್ತಡ ಇವೆಲ್ಲಾ ಕಾರಣಗಳಿಂದ ಆನೆಗಳು, ವನ್ಯಜೀವಿಗಳು ನಾಡಿನತ್ತ ಬಯಲು ಪ್ರದೇಶಕ್ಕೆ ಲಗ್ಗೆಯಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಡಗು ಜಿಲ್ಲೆಯ ಅಭಯಾರಣ್ಯಗಳಲ್ಲಿ ಅಂದಾಜು 200 ರಿಂದ 250 ಕ್ಕೂ ಅಧಿಕ ಕಾಡಾನೆಗಳು ನೆಲೆಸಿದ್ದು ಅರಣ್ಯ ವಲಯ ಸೇರಿದಂತೆ ಖಾಸಗಿ ಕಾಫಿ ತೋಟಗಳಲ್ಲಿ ವಿವಿಧೆಡೆ ಇವುಗಳ ಕಾರ್ಯಸ್ಥಾನವಾಗಿದೆ. ಒಂದು ಅಂದಾಜು ಪ್ರಕಾರ ದುಬಾರೆ ರಕ್ಷಿತಾರಣ್ಯದಲ್ಲಿ 35 ರಿಂದ 50, ಆನೆಕಾಡು ವ್ಯಾಪ್ತಿಯಲ್ಲಿ ಅಂದಾಜು 15, ಮೀನುಕೊಲ್ಲಿ ಅರಣ್ಯದಲ್ಲಿ 6, ಅತ್ತೂರು ವ್ಯಾಪ್ತಿಯಲ್ಲಿ 5, ಕೊಡಗರಹಳ್ಳಿ ಸುತ್ತಮುತ್ತ ತೋಟಗಳ ವ್ಯಾಪ್ತಿಯಲ್ಲಿ 10 ಕ್ಕೂ ಅಧಿಕ ಆನೆಗಳಿದ್ದು, ಕುಶಾಲನಗರ ಅರಣ್ಯ ವಲಯದಲ್ಲಿ 75 ಕ್ಕೂ ಹೆಚ್ಚು ಕಾಡಾನೆಗಳು ನೆಲೆಸಿರುವ ಬಗ್ಗೆ ಮಾಹಿತಿ ಇದೆ.

ಇನ್ನುಳಿದಂತೆ ಸೋಮವಾರಪೇಟೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಅಂದಾಜು 25, ಮಡಿಕೇರಿ-ಭಾಗಮಂಡಲ ವ್ಯಾಪ್ತಿಯಲ್ಲಿ 20, ವೀರಾಜಪೇಟೆ-ತಿತಿಮತಿ ವ್ಯಾಪ್ತಿಯಲ್ಲಿ 40 ಹಾಗೂ ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಅಂದಾಜು 50 ಕಾಡಾನೆಗಳು ನೆಲೆಸಿರುವ ಬಗ್ಗೆ ಅಂಕಿಅಂಶಗಳು ಗೋಚರಿಸಿದೆ. ಈ ನಡುವೆ ಮೈಸೂರು ಗಡಿಭಾಗದಲ್ಲಿ ಬೆಂಕಿ ಅನಾಹುತ ಹಾಗೂ ಇತರ ಸಂದರ್ಭಗಳಲ್ಲಿ ಕಾವೇರಿ ನದಿ ದಾಟಿ ಕೊಡಗು ಜಿಲ್ಲೆಗೆ ಬರುತ್ತಿರುವ ಆನೆಗಳ ನಿಖರವಾದ ಸಂಖ್ಯೆ ಇಲಾಖೆಗೆ ಇನ್ನೂ ದೊರಕುತ್ತಿಲ್ಲ.

2008 ರಲ್ಲಿ 8 ಕಾಡಾನೆಗಳನ್ನು ಹಿಡಿದು ಅರಣ್ಯ ಇಲಾಖೆ ಪಳಗಿಸುವ ಮೂಲಕ ಆಗಿಂದಾಗ್ಗೆ ಉಪಟಳದಲ್ಲಿ ತೊಡಗಿದ್ದ ಕಾಡಾನೆಗಳಿಂದ ರೈತರಿಗೆ ಮುಕ್ತಿ ದೊರಕಿಸಲಾಗಿತ್ತು. ನಂತರದ ದಿನಗಳಲ್ಲಿ ಕೊಡಗಿನ ವಿವಿಧ ಅರಣ್ಯಗಳಲ್ಲಿ ಈವರೆಗೆ ಅಂದಾಜು 55 ಕಾಡಾನೆಗಳು ವಿವಿಧ ಕಾರಣಗಳಿಂದ ಸಾವಿಗೀಡಾಗಿದ್ದು ಇದರೊಂದಿಗೆ 35 ಕ್ಕೂ ಅಧಿಕ ಮಾನವ ಜೀವ ಹಾನಿಯಾಗಿರುವ ಅಂಕಿಅಂಶಗಳು ಕಂಡುಬಂದಿತ್ತು. ಕಾಫಿ ತೋಟಗಳಲ್ಲಿ ಗುಂಡೇಟಿನಿಂದ ಕೆಲವು ಕಾಡಾನೆಗಳು ಮೃತಪಟ್ಟ ಘಟನೆಗಳು ಕೂಡ ನಡೆದಿವೆ. ಕಾಡಾನೆಗಳಿಗೆ ದಿನವೊಂದಕ್ಕೆ ಕನಿಷ್ಟ 100 ರಿಂದ 150 ಲೀಟರ್ ನೀರಿನ ಅವಶ್ಯಕತೆಯಿದ್ದು, 150 ರಿಂದ 200 ಕೆ.ಜಿ. ಪ್ರಮಾಣದ ಆಹಾರದ ಲಭ್ಯತೆ ಇರಬೇಕಾಗಿದೆ. ದಿನದಲ್ಲಿ ಆನೆಯೊಂದು 30-40 ಕಿ.ಮೀ. ದೂರದ ತನಕ ಸಂಚರಿಸುವದು ಸಾಮಾನ್ಯ. ಆನೆಗಳು ಎಲ್ಲಿಯೂ ವಿಶ್ರಾಂತಿ ತೆಗೆದುಕೊಳ್ಳುವದಿಲ್ಲ. ಮರಿ ಹಾಕುವ ಸಂದರ್ಭ ಆನೆ ಕನಿಷ್ಟ 4 ತಿಂಗಳ ಕಾಲ ನಿಂತುಕೊಂಡ ಸ್ಥಿತಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತದೆ ಎನ್ನುತ್ತಾರೆ ರಾಜ್ಯ ಎಲಿಫೆಂಟ್ ಪ್ರಾಜೆಕ್ಟ್‍ನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್.

ಆದರೆ ಅರಣ್ಯದಲ್ಲಿ ಬಿದಿರು ಮೆಳೆಗಳು ರೋಗಗ್ರಸ್ಥವಾಗುವದರೊಂದಿಗೆ ಕಾಡಿನಲ್ಲಿ ವನ್ಯಜೀವಿಗಳು ಸೇರಿದಂತೆ ಕಾಡಾನೆಗಳಿಗೆ ಆಹಾರದ ಕೊರತೆ ಅಧಿಕಗೊಂಡಿದೆ. ಆನೆ ಸಂಚಾರ ಸಂದರ್ಭ ದಾರಿಗೆ ಅಡ್ಡಿಯಾದಲ್ಲಿ ಮಾತ್ರ ಅವುಗಳು ಧಾಳಿ ಮಾಡುತ್ತವೆ ಹೊರತು ಸ್ವಯಂಪ್ರೇರಿತವಾಗಿ ಯಾವದೇ ಹಾನಿ ಉಂಟುಮಾಡುವದಿಲ್ಲ ಎನ್ನುವದು ಅವರ ಅಭಿಪ್ರಾಯ.

ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗುತ್ತಲೇ ಕಾಡಾನೆಗಳು ತಮ್ಮ ಸ್ವಸ್ಥಾನಕ್ಕೆ ಹಿಂದಿರುಗುವ ಕಾರ್ಯ ಪ್ರಾರಂಭವಾಗುತ್ತದೆ. ಈ ಸಂದರ್ಭ ನೆರೆಯ ಜಿಲ್ಲೆಯಿಂದ ಆಹಾರ ಅರಸಿ ಬರುವ, ಜಿಲ್ಲೆಯ ಗಡಿಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ಹಾನಿ ಮಾಡುವದು ಸಾಮಾನ್ಯವಾಗಿದೆ. ಕಾವೇರಿ ನದಿ ತಟಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಕ್ರಮ ಹೋಂಸ್ಟೇಗಳ ನಿರ್ಮಾಣ ಹಾಗೂ ನದಿಯ ಒತ್ತಿನಲ್ಲಿಯೇ ಆವರಣದ ಬೇಲಿ ನಿರ್ಮಾಣ, ಆನೆ ಕಾರಿಡಾರ್ ದಿಢೀರ್ ಬದಲಾವಣೆಗೆ ಕಾರಣವಾಗಿದೆ. ಇತ್ತೀಚಿನ ಬೆಂಕಿ ಅವಘಡದ ಕಾರಣಗಳಿಂದ ಆನೆಗಳಿಗೆ ತಮ್ಮ ಬಾಯಾರಿಕೆಯನ್ನು ನೀಗಿಸಲು ಕೂಡ ಅಡ್ಡಿಯುಂಟಾಗುತ್ತಿರುವದು ದುರಾದೃಷ್ಟಕರ.

ಇದೀಗ ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಕಾಫಿ ತೋಟಗಳ ಮಾಲೀಕರು ಸೇರಿದಂತೆ ಕಾರ್ಮಿಕರು ಭಯದ ವಾತಾವರಣದಲ್ಲಿ ದೈನಂದಿನ ಚಟುವಟಿಕೆಗಳಲ್ಲಿ ತೊಡಗಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿಯಲು ಕೂಡ ಕೇಂದ್ರ, ರಾಜ್ಯ ಸರಕಾರಗಳ ಅನುಮತಿ ಅವಶ್ಯವಾಗಿದ್ದು, ಇದೂ ಕೂಡ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ದೊರಕಿಸುವಲ್ಲಿ ಅಡ್ಡಿಯಾಗಿದೆ ಎನ್ನುವದು ಇಲಾಖಾ ಸ್ಥಳೀಯ ಅಧಿಕಾರಿಗಳ ಅಭಿಪ್ರಾಯ. ಕೊಡಗು ಜಿಲ್ಲೆಯಲ್ಲಿ 3 ಕಾಡಾನೆಗಳನ್ನು ಹಿಡಿಯಲು ಕಾರ್ಯಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಅರಣ್ಯ ಇಲಾಖೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಸಿಂಗ್ ತಿಳಿಸಿದ್ದಾರೆ.

ಕಾಡಿನಲ್ಲಿ ಆನೆಗಳಿಗೆ ಆಹಾರದ ಕೊರತೆ ಹಿನ್ನೆಲೆ ಆಹಾರ ಅರಸಿ ನಾಡಿಗೆ ಬರುವದು ಇತ್ತೀಚಿನ ಬೆಳವಣಿಗೆಯಾಗಿದ್ದು ಈ ಹಿನ್ನೆಲೆ ಅರಣ್ಯದಲ್ಲಿ ಬಿದಿರು, ಹಲಸು ಮುಂತಾದ ಗಿಡಗಳನ್ನು ಬೆಳೆಸುವ ಯೋಜನೆಗೆ ಚಾಲನೆ ನೀಡಬೇಕಿದೆ. ಈಗಾಗಲೇ ಮೀಸಲು ಅರಣ್ಯಗಳ ನಡುವೆ ಕೃತಕ ಕೆರೆಗಳನ್ನು ನಿರ್ಮಿಸಲಾಗಿದ್ದು, ವರ್ಷದ ಎಲ್ಲಾ ದಿನಗಳಲ್ಲಿ ಕಾಡು ಪ್ರಾಣಿಗಳಿಗೆ ನೀರು ಲಭ್ಯವಾಗುವ ನಿಟ್ಟಿನಲ್ಲಿ ಕೊಳವೆ ಬಾವಿಗಳನ್ನು ನಿರ್ಮಿಸಲು ಇಲಾಖೆ ಚಿಂತನೆ ಹರಿಸಿದೆ ಎಂದು ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ ಪ್ರತಿಕ್ರಿಯಿಸಿದ್ದಾರೆ.

ಇದರೊಂದಿಗೆ ಹಳೆಯ ಕೆರೆಗಳ ದುರಸ್ತಿ ಕಾರ್ಯ ನಡೆದಿದೆ ಎಂದಿರುವ ಅವರು, ಆನೆಗಳು ನಾಡಿಗೆ ಲಗ್ಗೆ ಇಡದಂತೆ ಕಂದಕಗಳ ನಿರ್ಮಾಣ ಕಾರ್ಯ ಮುಂದುವರೆದಿದೆ ಎಂದಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಮತ್ತೆ ಮುಂದುವರೆದಿರುವ ಆನೆ-ಮಾನವ ಸಂಘರ್ಷ ಮತ್ತು ಆನೆಗಳ ಮಾರಣ ಹೋಮಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಅರಣ್ಯ ಇಲಾಖೆ ಕಾರ್ಯಯೋಜನೆ ಸಿದ್ಧಪಡಿಸಬೇಕಾಗಿದೆ.

- ಸಿಂಚು