ಮಡಿಕೇರಿ, ಮಾ. 29: ಸೋಮವಾರಪೇಟೆಯಿಂದ ಬೆಂಗಳೂರಿಗೆ ಹಿಂತೆರಳುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರ ಮೇಲೆ ಕೇಂದ್ರ ಕೈಗಾರಿಕಾ ಮೀಸಲು ಪಡೆ ಸಿಬ್ಬಂದಿಯೊಬ್ಬರು ಹಲ್ಲೆ ನಡೆಸಿರುವ ಘಟನೆ ಇಂದು ಅಪರಾಹ್ನ ಹೊಳೆನರಸಿಪುರ ಬಳಿ ಸಂಭವಿಸಿದೆ.

ಸೋಮವಾರಪೇಟೆಯಿಂದ ಎಂದಿನಂತೆ ಹಗಲು 11.45ರ ಸುಮಾರಿಗೆ ಹೊರಟ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊಳೆನರಸೀಪುರ ಬಳಿಯ ಮೂಡಲಹಿಪ್ಪೆ ಎಂಬಲ್ಲಿ ತಲಪುತ್ತಿದ್ದಂತೆ ಸಿ.ಐ.ಎಸ್.ಎಫ್. ಸಿಬ್ಬಂದಿಯಾಗಿರುವ ನಾಗರಾಜ್ ಬಸ್ ನಿಲ್ಲಿಸುವಂತೆ ಒತ್ತಾಯಿಸಿದ್ದಾಗಿ ತಿಳಿದುಬಂದಿದೆ.

ಅಲ್ಲಿ ನಿಲುಗಡೆಯಿಲ್ಲವೆಂದು ಚಾಲಕ ಬಸ್ ನಿಲ್ಲಿಸದೆ ಸಾಗಿದಾಗ, ನಾಗರಾಜ್ ತನ್ನ ಬಳಿಯಿದ್ದ ಮಚ್ಚಿನಿಂದ ಚಾಲಕ ಸದಾಶಿವಯ್ಯ ಅವರ ತಲೆಗೆ ಘಾಸಿಗೊಳಿಸಿದ್ದಾಗಿ ಹೊಳೆನರಸೀಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಾಯಾಳು ಚಾಲಕ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದು, ಆರೋಪಿ ವಿರುದ್ಧ ಕಾಯ್ದೆ 353, 332 ಹಾಗೂ 504ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ. ಆರೋಪಿ ನಾಗರಾಜ್ ರಜೆಯಲ್ಲಿ ಊರಿಗೆ ಬಂದಿದ್ದ ವೇಳೆ ಕೃತ್ಯ ಎಸಗಿರುವದಾಗಿ ಮೂಲಗಳು ತಿಳಿಸಿವೆ.