ಆಲೂರುಸಿದ್ದಾಪುರ, ಮಾ. 29: ಸೋಮವಾರಪೇಟೆ ತಾಲೂಕು ಐಟಿಡಿಪಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಲೂರುಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ ಮಾಲಂಬಿ ಗ್ರಾಮದಲ್ಲಿರುವ ಗಿರಿಜನ ಹಾಡಿಯಲ್ಲಿ ಗಿರಿಜನ ಮತದಾರರಿಗೆ ಚುನಾವಣೆಯಲ್ಲಿ ಮತದಾನದ ಹಕ್ಕು ಕುರಿತು ಜಾಗೃತಿ ಮೂಡಿಸಿದರು. ಗಿರಿಜನ ಹಾಡಿಯ ಮನೆಗಳಿಗೆ ತೆರಳಿ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿರುವ ಮತದಾರರು ಮತಗಟ್ಟೆಗೆ ಹೋಗಿ ತಪ್ಪದೆ ಮತದಾನದ ಹಕ್ಕನ್ನು ಚಲಾಯಿಸುವದು, ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಗೆ ಯಾವದೆ ಅಂಜಿಕೆಯಿಲ್ಲದೆ ಮತ ಚಲಾಯಿಸುವದು ಇನ್ನು ಮುಂತಾದ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಐಟಿಡಿಪಿ ಇಲಾಖೆಯ ಯೋಜನಾ ಸಂಯೋಜಕ ಪ್ರಕಾಶ್, ತಾಲೋಕು ಸಮಾಜ ಕಲ್ಯಾಣ ಅಧಿಕಾರಿ ಚಿಕ್ಕಬಸವಯ್ಯ, ಮಾಲಂಬಿ ಸರಕಾರಿ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ರಜನಿಕಾಂತ್ ಮುಂತಾದವರಿದ್ದರು.